ಬೆಂಗಳೂರು: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಎರಡು ವರ್ಷ ಬ್ರಿಜ್ ಕೋರ್ಸ್ ಪೂರ್ಣಗೊಳಿಸಿ ಪದವಿ ಪಡೆದ ಭಾರತೀಯರು ಅಖಿಲ ಭಾರತ ವಕೀಲರ ಪರೀಕ್ಷೆ ಹೊರತುಪಡಿಸಿ ಬೇರೆ ಯಾವುದೇ ಕೋರ್ಸ್ ಮಾಡುವಂತೆ ಒತ್ತಾಯಿಸದೇ ಅವರಿಗೆ ನೋಂದಣಿ ನೀಡಬೇಕು ಎಂದು ರಾಜ್ಯ ವಕೀಲರ ಪರಿಷತ್ ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದೇಶಿ ಕಾನೂನು ಪದವಿ ಪಡೆದಿರುವ ಭಾರತೀಯರು ಅರ್ಹತಾ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾ 2020 ರಂದು ಹೊರಡಿಸಿದ್ದ ಅಧಿಸೂಚನೆಯ ನಿರ್ದಿಷ್ಟ ಭಾಗ ವಜಾಗೊಳಿಸುವಂತೆ ಕೋರಿ ಕರಣ್ ಧನಂಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಪುರಸ್ಕರಿಸಿದೆ.
2023ರ ಮಾರ್ಚ್ 21ರಂದು ಭಾರತೀಯ ವಕೀಲರ ಪರಿಷತ್ ಹೊರಡಿಸಿದ ಅಧಿಸೂಚನೆಯ ಪ್ರಕಾರ ಅಖಿಲ ಭಾರತ ವಕೀಲರ ಪರೀಕ್ಷೆ ಅರ್ಹತಾ ಪರೀಕ್ಷೆ ಹೊರತುಪಡಿಸಿ ಬೇರೆ ಯಾವುದೇ ಪರೀಕ್ಷೆ ತೆಗೆದುಕೊಳ್ಳಬೇಕಿಲ್ಲ. ಮೂರನೇ ಪ್ರತಿವಾದಿಯಾಗಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೇರೆ ಯಾವುದೇ ಅರ್ಹತಾ ಪರೀಕ್ಷೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡದೆ ಪೂರಕ ಕೋರ್ಸ್ ಫಲಿತಾಂಶ ಆಧರಿಸಿ ಅರ್ಜಿದಾರರನ್ನು ನೋಂದಾಯಿಸಿಕೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರು ದ್ವಿತೀಯ ಪಿಯುಸಿ ನಂತರ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರಿಗಣಿಸಿರುವ ವಿದೇಶಿ ವಿವಿಗಳ ಪಟ್ಟಿಯಲ್ಲಿರುವ ಬರ್ನಿಂಗ್ ಹ್ಯಾಮ್ ಸಿಟಿ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಲಾ ವಿತ್ ಹಾನರ್ಸ್ ಗೆ ಪ್ರವೇಶ ಪಡೆದಿದ್ದರು. 2017ರಿಂದ 20ರವರೆಗೆ 3 ವರ್ಷ ಅಧ್ಯಯನ ನಡೆಸಿದ್ದು, ಪದವಿ ಪಡೆದಿದ್ದಾರೆ. ಭಾರತಕ್ಕೆ ಮರಳಿದ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ 2023 ರಲ್ಲಿ ಪೂರಕ ಕೋರ್ಸ್ ಪೂರ್ಣಗೊಳಿಸಿದ್ದಾರೆ.
ಆದರೆ, ವಿದೇಶಿ ಕಾನೂನು ಪದವಿ ಪಡೆದಿರುವ ಭಾರತೀಯರಿಗೆ ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರು.