
ಬೆಂಗಳೂರು: ಆಸ್ತಿ ಮಾರಾಟ ಅಥವಾ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮೊದಲು ಅಂತಹ ದಾಖಲೆ ಸಲ್ಲಿಸುವ ವ್ಯಕ್ತಿಯ ಆಧಾರ್ ಅಧಿಕೃತತೆ ಪರಿಶೀಲಿಸಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ಆದೇಶ ನೀಡಿದೆ.
ಅನಾಮಧೇದೇಯ ವ್ಯಕ್ತಿ ಮಾರಾಟ ಮಾಡಿದ್ದಾರೆ ಎನ್ನುವ ಆಧಾರದ ಮೇಲೆ ನನ್ನ ಭೂಮಿಯ ಋಣಭಾರ ಪತ್ರದಲ್ಲಿ ನೋಂದಾಯಿಸಿರುವ ಹೆಸರು ತೆಗೆಯಬೇಕೆಂದು ಕೋರಿದ ಮನವಿಯನ್ನು ಸಬ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ ಎಂದು ಆಕ್ಷೇಪಿಸಿ ರಾಜೇಶ್ ತಿಮ್ಮಣ್ಣ ಉಮ್ರಾಣಿ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
ಆಧಾರ್(ನಿರ್ದಿಷ್ಟ ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ವಿತರಣೆ) ಕಾಯ್ದೆ 2016ರ ಪ್ರಕಾರ ಯುಐಡಿಎಐ ನೊಂದಿಗೆ ನೋಂದಣಿ ಮಾಡಿಕೊಂಡಿರುವ ಯಾವುದೇ ಸೇವಾ ಪೂರೈಕೆದಾರರು ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಆಧರಿಸಿ ಅದರ ಅಧಿಕೃತತೆ ಪರಿಶೀಲಿಸಿಕೊಳ್ಳಬೇಕಿದೆ. ಪರಿಶೀಲನೆ ನಂತರವೇ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ಹೈಕೋರ್ಟ್ ತಿಳಿಸಿದ್ದು, ನೋಂದಣಿಗೆ ಮೊದಲು ಆಧಾರ್ ಅಧಿಕೃತತೆ ಪರಿಶೀಲಿಸಬೇಕೆಂದು ಆದೇಶ ನೀಡಿದೆ.