ಬೆಂಗಳೂರು: ಕೊಲೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಗೆ ಮದುವೆಯಾಗಲು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಕೊಲೆ ಕೇಸ್ ಅಪರಾಧಿಯೊಂದಿಗೆ ಮದುವೆ ಬಯಸಿ ಯುವತಿ ಅರ್ಜಿ ಸಲ್ಲಿಸಿದ್ದಾರೆ. ಪ್ರೀತಿಸಿದ ಯುವಕನನ್ನು ಮದುವೆಯಾಗಲು ಪೆರೋಲ್ ನೀಡಬೇಕೆಂದು ಹೈಕೋರ್ಟ್ ಗೆ ರಿಟರ್ಜಿ ಸಲ್ಲಿಸಿದ್ದರು. ಯುವತಿ ಹಾಗೂ ಅಪರಾಧಿ ಆನಂದ್ 9 ವರ್ಷಗಳಿಂದ ಪ್ರೀತಿಸುತ್ತಿದ್ದರು.
ವ್ಯಾಜ್ಯವೊಂದರ ಕೊಲೆ ಪ್ರಕರಣದಲ್ಲಿ ಯುವಕ ಜೈಲು ಸೇರಿದ್ದಾನೆ. ಈ ಮಧ್ಯೆ ಬೇರೆಯವರ ಜೊತೆಗೆ ಮದುವೆಯಾಗುವಂತೆ ಯುವತಿಗೆ ಮನೆಯವರು ಒತ್ತಡ ಹಾಕಿದ್ದಾರೆ. ಹೀಗಾಗಿ ಯುವತಿ ಹಾಗೂ ಯುವಕ ಆನಂದ್ ಅವರ ತಾಯಿ ರತ್ನಮ್ಮ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮದುವೆಯಾಗಲು ಪೆರೋಲ್ ನೀಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಪೆರೋಲ್ ನೀಡದಿದ್ದರೆ ತನ್ನ ಜೀವದ ಪ್ರೀತಿ ಸಿಗುವುದಿಲ್ಲ. ಹೀಗಾಗಿ ಮದುವೆಯಾಗಲು 15 ದಿನಗಳ ತುರ್ತು ಪೆರೋಲ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮದುವೆಗೆ ಪೆರೋಲ್ ನೀಡಲು ನಿಯಮದಲ್ಲಿ ಅವಕಾಶವಿಲ್ಲವೆಂದು ಸರ್ಕಾರಿ ವಕೀಲ ವಿನೋದ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 5ರಿಂದ 20ರವರೆಗೆ ಷರತ್ತು ಬದ್ಧ ಪೆರೊಲ್ ನೀಡಲು ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. ವಾದ ಆಲಿಸಿದ ಹೈಕೋರ್ಟ್ ನ್ಯಾಯ ಪೀಠ ಅರ್ಜಿದಾರರು ಮಾಡಿದ ಮನವಿಯನ್ನು ಪುಷ್ಟಿಕರಿಸಬಹುದಾದ ಬಾಂಬೆ ಹೈಕೋರ್ಟ್, ರಾಜಸ್ಥಾನ ಹೈಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ ನ ವಿಭಾಗೀಯ ಪೀಠಗಳ ಹಲವು ಆದೇಶಗಳನ್ನು ಉಲ್ಲೇಖಿಸಿ 15 ದಿನಗಳ ಕಾಲ ಪೆರೋಲ್ ನೀಡಲು ಸೂಚಿಸಿದೆ.