ಬೆಂಗಳೂರು: ತಮ್ಮ ಮಾಲೀಕತ್ವದ ಸ್ಥಿರಾಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ, ಪರವಾನಿಗೆ ಶುಲ್ಕ ಸೇರಿದಂತೆ ವಿವಿಧ ಶುಲ್ಕದ ರೂಪದಲ್ಲಿ 41 ಲಕ್ಷ ರೂ. ಪಾವತಿಸಲು ಬಿಬಿಎಂಪಿ ಜಾರಿಗೊಳಿಸಿದ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ಸಚಿವ ದಿನೇಶ್ ಗುಂಡೂರಾವ್ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ದಿನೇಶ್ ಗುಂಡೂರಾವ್ ಮತ್ತು ಅವರ ಪತ್ನಿ ತಬಸ್ಸುಮ್ ದಿನೇಶ್ ರಾವ್ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠದಲ್ಲಿ ಮಂಗಳವಾರ ನಡೆದಿದೆ. ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಆರ್‌ಟಿ ನಗರದ ಮಠದಹಳ್ಳಿಯಲ್ಲಿ ತಮ್ಮ ಒಡೆತನದಲ್ಲಿರುವ 608.21 ಚದರ ಅಡಿ ಆಸ್ತಿ ಇದೆ. ಇದಕ್ಕೆ ಬಿಬಿಎಂಪಿ ಖಾತಾ ಸಹ ನೀಡಿದೆ. ಈ ಆಸ್ತಿಗೆ ಇದುವರೆಗೂ ತೆರೆಗೆ ಪಾವತಿಸಲಾಗಿದೆ. ಈಗ ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ, ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ ಶುಲ್ಕ, ಅದರ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ, ಭದ್ರತಾ ಠೇವಣಿ ಕಟ್ಟಡ ಹಾಗೂ ನಿವೇಶನ ಅಭಿವೃದ್ಧಿ ಶುಲ್ಕ ಕೆರೆ ಜೀರ್ಣೋದ್ಧಾರ ಶುಲ್ಕ, ವರ್ತುಲ ರಸ್ತೆ ಶುಲ್ಕ, ಕೊಳಗೇರಿ ಅಭಿವೃದ್ಧಿ ಸೇರಿದಂತೆ ವಿವಿಧ ಬಗೆಯ 41.55 ಲಕ್ಷ ರೂ. ಶುಲ್ಕ, ತೆರಿಗೆ ಸೆಸ್ ಗಳು ಹಾಗೂ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಆಗಸ್ಟ್ 29ರಂದು ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ತಾವು ಹೊಣೆಗಾರರಲ್ಲ, ಡಿಮ್ಯಾಂಡ್ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಪಾಲಿಕೆ ಜಾರಿಗೊಳಿಸಿದ ಡಿಮಾಂಡ್ ನೋಟಿಸ್ ರದ್ದು ಮಾಡಬೇಕು ತಮ್ಮ ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಯಾವುದೇ ಷರತ್ತು ತೆರಿಗೆ ಶುಲ್ಕ ವಿಧಿಸದೆ ನಕ್ಷೆ ಮಂಜೂರಾತಿ ನೀಡಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.