ಬೆಂಗಳೂರು: 18 ವರ್ಷ ತುಂಬವವರೆಗೆ ಮಾತ್ರ ಪುತ್ರಿಗೆ ಜೀವನಾಂಶ ಪಾವತಿಸಲು ಅವಕಾಶವಿದೆ. ಮದುವೆಯಾಗುವವರೆಗೆ ಅಲ್ಲ, ಉದ್ಯೋಗ ನಿರತ ತಾಯಿ ಕೂಡ ಮಕ್ಕಳ ಜೀವನ ನಿರ್ವಹಣೆಗೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪುತ್ರಿಯರು 18 ವರ್ಷ ತುಂಬುವವರೆಗೆ ತಂದೆಯ ಜೀವನಾಂಶ ಪಡೆಯಲು ಅವಕಾಶವಿದೆ ಹೊರತೂ ಮದುವೆಯಾಗುವವರೆಗೆ ಅಲ್ಲ. ಉದ್ಯೋಗ ನಿರತ ತಾಯಿ ಕೂಡ ಮಕ್ಕಳ ಜೀವನ ನಿರ್ವಹಣೆಗೆ ಸಮಾನ ಜವಾಬ್ದಾರರು ಎಂದು ಹೈಕೋರ್ಟ್ ಆದೇಶ ನೀಡಿದೆ.
ತನಗೆ ಮತ್ತು ಇಬ್ಬರು ಪುತ್ರಿಯರಿಗೆ ಕಡಿಮೆ ಜೀವನಾಂಶಶ ಪಾವತಿಸಲು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದ್ದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಈ ಆದೇಶ ನೀಡಿದೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಅವಿವಾಹಿತ ಹೆಣ್ಣು ಮಕ್ಕಳು ಜೀವನಾಂಶ ಪಡೆಯಲು ಅರ್ಹರಾಗಿರುವುದಿಲ್ಲ. ನೊಂದ ವ್ಯಕ್ತಿಗಳು ಅಥವಾ 18 ವರ್ಷದೊಳಗಿನ ಮಕ್ಕಳು ಜೀವನಾಂಶಕ್ಕೆ ಮನವಿ ಮಾಡಬಹುದು. ಮಕ್ಕಳು ವಯಸ್ಕರಾಗುವವರೆಗೆ ಮಾತ್ರ ಜೀವನಾಂಶ ಕೋರಬಹುದು. ಹಿಂದೂ ದತ್ತು ಹಾಗೂ ನಿರ್ವಹಣಾ ಕಾಯ್ದೆಯ ಪ್ರಕಾರ ವಯಸ್ಕರಾದ ನಂತರ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಮರ್ಥರಾದ ಸಂದರ್ಭದಲ್ಲಿ ಪುತ್ರಿಯರು ತಂದೆಯಿಂದ ಜೀವನಾಂಶ ಕೋರಲು ಸ್ವತಂತ್ರರಾಗಿರುತ್ತಾರೆ.
ಈ ಪ್ರಕರಣದಲ್ಲಿ ತಂದೆ, ತಾಯಿ ಶಿಕ್ಷಕರಾಗಿದ್ದು, ತಂದೆ ಮೇಲೆ ಮಾತ್ರ ಮಕ್ಕಳ ಜೀವನ ನಿರ್ವಹಣೆ ಇರುವುದಿಲ್ಲ. ತಾಯಿಯ ಜವಾಬ್ದಾರಿಯೂ ಇರುತ್ತದೆ ಎಂದು ನ್ಯಾಯಪೀಠ ಹೇಳಿದೆ.