ಬೆಂಗಳೂರು: ಅತ್ಯಾಚಾರ ಆರೋಪಿ ಜೊತೆ ಸಂತ್ರಸ್ತೆ ಮದುವೆಯಾಗಿದ್ದು, ಹೈಕೋರ್ಟ್ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿದ್ದ 23 ವರ್ಷದ ಯುವಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಇದನ್ನು ಹೈಕೋರ್ಟ್ ರದ್ದು ಮಾಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ತೀರ್ಪು ನೀಡಲಾಗಿದೆ.
ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿತ್ತು. 17 ವರ್ಷದ ಸಂತ್ರಸ್ತೆ 18 ವರ್ಷವಾದ ಬಳಿಕ ಆರೋಪಿಯನ್ನೇ ಮದುವೆಯಾಗಿದ್ದು, ವಿಚಾರಣೆ ನಡೆಯುತ್ತಿರುವ ನಡುವೆಯೇ ದಂಪತಿಗೆ ಮಗು ಆಗಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅರ್ಜಿದಾರರ ವಿರುದ್ಧದ ತಪ್ಪು ಸಾಬೀತುಪಡಿಸಲು ಕಷ್ಟವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಪ್ರಾಸಿಕ್ಯೂಷನ್ ವಿರೋಧ ನಿರ್ಲಕ್ಷಿಸಿದ ಕೋರ್ಟ್ ಕಕ್ಷಿದಾರ ಮತ್ತು ಸಂತ್ರಸ್ತೆ ನಡುವಿನ ಒಪ್ಪಂದ ಅಂಗೀಕರಿಸದಿರುವುದು ಮತ್ತು ಮದುವೆಯಾಗಿ ಮಗು ಬೆಳೆಸುತ್ತಿರುವ ದಂಪತಿಗೆ ನ್ಯಾಯಾಲಯದ ಬಾಗಿಲು ಮುಚ್ಚಿದರೆ ಇಡೀ ಪ್ರಕ್ರಿಯೆ ನ್ಯಾಯಾಂಗ ವ್ಯವಸ್ಥೆಯ ತಪ್ಪಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಕ್ರಿಮಿನಲ್ ಕೇಸ್ ರದ್ದುಗೊಳಿಸಿದೆ.
ಯುವಕನೊಂದಿಗೆ ಯುವತಿ ಒಮ್ಮತದಿಂದ ಜೊತೆಗೆ ಹೋಗಿದ್ದರೂ ಆಗ ಆಕೆಗೆ 17 ವರ್ಷವಾಗಿದ್ದ ಕಾರಣ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ನಂತರ ಜಾಮೀನು ನೀಡಲಾಗಿತ್ತು. 2020ರಲ್ಲಿ ಅವರು ಮದುವೆಯಾಗಿದ್ದು, ಒಂದು ವರ್ಷದ ನಂತರ ಹೆಣ್ಣು ಮಗು ಜನಿಸಿದೆ.
ಹಲವಾರು ಸಾಂವಿಧಾನಿಕ ನ್ಯಾಯಾಲಯಗಳು ಇಂತಹ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಬಾಕಿ ವಿಚಾರಣೆ ಮುಕ್ತಾಯಗೊಳಿಸಿರುವುದನ್ನು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.