ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್ಐಆರ್ ಗಳ ತನಿಖೆ ಪ್ರಗತಿ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ನಿರ್ದೇಶನ ನೀಡಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ಮಾಡಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದೆ.
ವಿಶೇಷ ತನಿಖಾ ತಂಡದ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದ್ದು, ಎಜಿ ಪ್ರಭುಲಿಂಗ ನಾವದಗಿ ಅವರು ಪೋಷಕರು ಸಲ್ಲಿಸಿದ ದೂರಿನಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಯುವತಿ ನೀಡಿರುವ ದೂರಿನ ತನಿಖೆ ಪ್ರಗತಿ ಹಂತದಲ್ಲಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗಿದೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಪರ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಸಿಬಿಐ ತನಿಖೆ ಬಗ್ಗೆ ಮೂರನೇ ವ್ಯಕ್ತಿಗಳು ನಿರ್ಧರಿಸಬಾರದು. ಅಂತಹ ಅರ್ಜಿಗಳ ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಭಾಗೀಯ ಪೀಠ, ನ್ಯಾಯಸಮ್ಮತ ತನಿಖೆ ನಡೆಸುವುದು ನ್ಯಾಯಾಲಯದ ಉದ್ದೇಶವಾಗಿದೆ ಎಂದು ಹೇಳಿದೆ. ಪ್ರಕರಣದ ಕುರಿತಂತೆ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿ ಜೂನ್ 17 ರಂದು ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದ್ದು, ವಿಚಾರಣೆಯನ್ನು ಜೂನ್ 18 ಕ್ಕೆ ಮುಂದೂಡಲಾಗಿದೆ.