ಬೆಂಗಳೂರು: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಒಂದು ವರ್ಷ ಕಾಲಮಿತಿ ನಿಗದಿಪಡಿಸಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸಂತ್ರಸ್ತೆಯ ಹಿತದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿ ಪ್ರತಿ ಎರಡು ತಿಂಗಳಿಗೊಮ್ಮೆ ಸಂತ್ರಸ್ತೆಯ ಮನೆಗೆ ಭೇಟಿ ನೀಡಬೇಕು. ಸಂತ್ರಸ್ತೆ ಮತ್ತು ಅವರ ಕುಟುಂಬ ಸದಸ್ಯರು ಜೀವನ ನಡೆಸಲು ಅಗತ್ಯ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಬೇಕು. ಅವರು ಈ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.