ಬೆಂಗಳೂರು: ಕ್ಯಾನ್ಸರ್ ಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಕಲ್ಪಿಸಲು 42 ಔಷಧಗಳ ಬೆಲೆಗೆ ಮಿತಿ ಹೇರಿದ ಕೇಂದ್ರ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮಾರಕ ಕ್ಯಾನ್ಸರ್ ಕಾಯಿಲೆಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಕಲ್ಪಿಸುವ ಸಲುವಾಗಿ 42 ಔಷಧಗಳ ಬೆಲೆಗೆ ಕೇಂದ್ರ ಸರ್ಕಾರ ಮಿತಿ ಹೇರಿದ್ದು, ಈ ಕ್ರಮ ಪ್ರಶ್ನಿಸಿ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಕೇಂದ್ರದ ಆದೇಶದಲ್ಲಿ ಮಧ್ಯ ಪ್ರವೇಶ ಮಾಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಕ್ಯಾನ್ಸರ್ ಔಷಧ ತಯಾರಕರು ಸಾಮಾನ್ಯ ಬೆಲೆಗಿಂತ ಶೇಕಡ 900ಕ್ಕೂ ಅಧಿಕ ದರದಲ್ಲಿ ಔಷಧ ಮಾರಾಟ ಮಾಡುತ್ತಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸರ್ಕಾರ ಕ್ಯಾನ್ಸರ್ ಚಿಕಿತ್ಸೆಯನ್ನು ಕೈಗೆಟುಕುವ ರೀತಿಯಲ್ಲಿ ಮಾಡಲು ಔಷಧ ದರಕ್ಕೆ ಮಿತಿ ವಿಧಿಸಿರುವುದು ಸರಿಯಾಗಿದ್ದು, ಸರ್ಕಾರ ಇಂತಹ ನೀತಿ ಪ್ರಕಟಿಸದಿದ್ದರೆ ಬಡವರು, ಮಧ್ಯಮ ವರ್ಗದವರು ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ.