ಬೆಂಗಳೂರು: ಸಂಪುಟ ದರ್ಜೆ ಸ್ಥಾನ ಮಾನ ಸಚಿವರಿಗಷ್ಟೇ ಸೀಮಿತ ಎಂದೇನಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರ ನೇಮಕ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಸಚಿವರಲ್ಲದವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ ಎಂದು ಮೌಖಿಕವಾಗಿ ತಿಳಿಸಿದೆ.
ಈ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಕೆ. ಗೋವಿಂದರಾಜ್, ಸಿಎಂ ಸಲಹೆಗಾರರಾಗಿ ಸುನಿಲ್ ಕುನುಗೋಲು, ಕೆ.ವಿ. ಪ್ರಭಾಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ವಕೀಲ ಎಸ್. ಉಮಾಪತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ವೇಳೆ ವಿಭಾಗಿಯ ಪೀಠ, ಸಚಿವರನ್ನು ಹೊರತುಪಡಿಸಿ ಬೇರೆಯವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಬಾರದು ಎಂಬ ವಿಚಾರವನ್ನು ಎಲ್ಲಿಯೂ ಹೇಳಿಲ್ಲ. ಮುಖ್ಯಮಂತ್ರಿ ಕಾರ್ಯದರ್ಶಿ ಹಾಗೂ ವಿವಿಧ ಸಲಹೆಗಾರರಾಗಿ ನೇಮಕವಾದವರಿಗೆ ಯಾವುದೇ ಇಲಾಖೆಯ ಜವಾಬ್ದಾರಿ ನೀಡಲಾಗಿಲ್ಲ. ಅವರ ನೇಮಕಾತಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.