ಬೆಂಗಳೂರು: ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಉದ್ಯಾನವನ, ಸ್ಮಶಾನ, ಆಟದ ಮೈದಾನ ಸೇರಿ ಸಾರ್ವಜನಿಕ ಬಳಕೆಗೆ ಮೀಸಲಾಗಿಟ್ಟ ಸಿಎ ನಿವೇಶನವನ್ನು 5 ವರ್ಷಗಳಲ್ಲಿ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರಗಳು ಸ್ವಾಧೀನಪಡಿಸಿಕೊಳ್ಳದಿದ್ದರೆ ಕಾಯ್ದಿರಿಸಿದ ಜಾಗದ ಮೇಲಿನ ಹಕ್ಕು ರದ್ದಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಉದ್ಯಾನವನ, ಸ್ಮಶಾನ, ಆಟದ ಮೈದಾನ ಮೊದಲಾದ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು 5 ವರ್ಷಗಳಲ್ಲಿ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರಗಳು ಸ್ವಾಧೀನ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅಂತಹ ಮೀಸಲಾತಿ ರದ್ದಾಗುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ.
ಬೆಂಗಳೂರಿನ ಜಯಮಹಲ್ ಮುಖ್ಯರಸ್ತೆಯಲ್ಲಿರುವ ಜಯಮಹಲ್ ಹೋಟೆಲ್ ಮಾಲೀಕರು ಮತ್ತು ಅವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಅರ್ಜಿದಾರರ ಭೂಮಿಯನ್ನು ಪರಿಷ್ಕೃತ ಯೋಜನೆಯಡಿ 2007ರ ಜೂನ್ 25ರಂದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟು ಬಿಡಿಎ ಆದೇಶ ಹೊರಡಿಸಿತ್ತು. ಆ ಅವಧಿ 2012ರ ಜೂನ್ 24ಕ್ಕೆ ಕೊನೆಗೊಂಡಿದೆ. ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಆ ಜಾವಗವನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿಲ್ಲ. ಹೀಗಾಗಿ ಮೀಸಲಿಟ್ಟಿರುವುದು ರದ್ದಾಗುತ್ತದೆ. ಭೂ ಮಾಲೀಕರು ತಮ್ಮ ಭೂಮಿಯನ್ನು ಮರು ನಿಯೋಜಿಸಲು ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಆದೇಶ ನೀಡಿದೆ.
ಕ್ರಮ ಕೈಗೊಳ್ಳಲು ಬಿಡಿಎಗೆ 180 ದಿನಗಳ ಗಡುವು ನೀಡಲಾಗಿದೆ. ಈಗಾಗಲೇ ಆಗಿರುವ ಅಭಿವೃದ್ಧಿಗಳನ್ನು ಬದಲಾಯಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.