ದಾವಣಗೆರೆ: ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಳಗಾವಿಯಲ್ಲಿ ಬಂಧಿತರಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಕರೆತರುವ ಮಾರ್ಗ ಮಧ್ಯ ದಾವಣಗೆರೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ದಾವಣಗೆರೆಯ ಐಬಿಯಲ್ಲಿ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿ ರವಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸಿ.ಟಿ. ರವಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಆದೇಶದ ಪ್ರತಿ ಕೈಸೇರುತ್ತಿದ್ದಂತೆ ಬಿಡುಗಡೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ನಾಯಕರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ರಾಮಚಂದ್ರ ಮೊದಲಾದವರಿದ್ದರು.