ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಆರೋಪದಡಿ ಬಂಧಿತರಾಗಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನ್ಯಾಯಮೂರ್ತಿ ಜಿ.ಎಂ. ಉಮಾ ಕೂಡಲೇ ಸಿ.ಟಿ. ರವಿ ಅವರನ್ನು ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದ್ದಾರೆ.
ಇದರ ಬೆನ್ನಲ್ಲೇ ಚಿಕ್ಕಮಗಳೂರಿನ ಸಿ.ಟಿ. ರವಿ ನಿವಾಸದ ಬಳಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಬಸವನಹಳ್ಳಿ ರಸ್ತೆಯ ಸಿ.ಟಿ. ರವಿ ಮನೆಯ ಮುಂದೆ ಸಂಭ್ರಮಾಚರಣೆ ನಡೆಸಲಾಗಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.
ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ. ರವಿ ಅವರನ್ನು ಕರೆ ತರುತ್ತಿದ್ದ ಪೊಲೀಸರು ಮಾರ್ಗ ಮಧ್ಯೆ ಹಾವೇರಿ ಪ್ರವಾಸಿ ಮಂದಿರದಲ್ಲಿ ಊಟಕ್ಕಾಗಿ ವಾಹನ ನಿಲ್ಲಿಸಿದ್ದಾರೆ. ಸಿ.ಟಿ. ರವಿ ವಾಹನದ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ತೆರಳುತ್ತಿದ್ದಾರೆ. ನಾಳೆ ಹೈಕೋರ್ಟ್ ನಲ್ಲಿ ಸಿ.ಟಿ. ರವಿ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಗುವುದು.