ಬೆಂಗಳೂರು: ನ್ಯಾಯಾಲಯದ ಆದೇಶ, ತೀರ್ಪುಗಳನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಅನುಕೂಲವಾಗುವಂತೆ ಪ್ರತಿ ಇಲಾಖೆಯಲ್ಲಿಯೂ ಪ್ರತ್ಯೇಕ ಕೋಶ ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಕೋರ್ಟ್ ಆದೇಶ ಪಾಲನೆ ಮಾಡದಿರುವ ಬಗ್ಗೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಪಿಐಎಲ್ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ ಕುಮಾರ್ ಅವರಿದ್ದ ಪೀಠದಲ್ಲಿ ಸೋಮವಾರ ನಡೆದಿದೆ.
ಸರ್ಕಾರದ ಇಲಾಖೆಗಳಲ್ಲಿ ಕಾನೂನು ಕೋಶಗಳನ್ನು ರಚನೆ ಮಾಡಬೇಕು. ಆದೇಶಗಳನ್ನು ಸ್ವೀಕರಿಸಿ ನಿರ್ದೇಶನಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಇದರಿಂದ ನ್ಯಾಯಾಂಗ ನಿಂದನೆ ಅರ್ಜಿಗಳು ದಾಖಲಾಗುವುದು ತಪ್ಪುತ್ತದೆ. ಕೋಶದ ಅಧಿಕಾರಿಗಳು ನ್ಯಾಯಾಲಯಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಪಾಲನೆ ಮಾಡುವ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ಕೋರ್ಟ್ ಸಲಹೆ ನೀಡಿದೆ.
ನ್ಯಾಯಾಲಯಗಳ ಸರಳ ಆದೇಶಗಳನ್ನು ಒಂದೂವರೆ ವರ್ಷವಾದರೂ ಪರಿಗಣಿಸುತ್ತಿಲ್ಲ ಎಂದು ಕೋರ್ಟ್ ತಿಳಿಸಿದೆ. ಅಡ್ವೊಕೇಟ್ ಜನರಲ್ ಜೊತೆ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸರ್ಕಾರ ಒಂದು ಯೋಜನೆ ಸಲ್ಲಿಸಲಿ ಎಂದು ನಿರ್ದೇಶನ ನೀಡಲಾಗಿದ್ದು, ಆ. 22ಕ್ಕೆ ವಿಚಾರಣೆ ಮುಂದೂಡಲಾಗಿದೆ.