ಬೆಂಗಳೂರು: ಜನನ ಮತ್ತು ಮರಣ ನೋಂದಣಿ ಪ್ರಕರಣಗಳನ್ನು ನ್ಯಾಯಾಲಯಗಳಿಂದ ಉಪವಿಭಾಗಾಧಿಕಾರಿಗೆ ವರ್ಗಾಯಿಸಿ ಸರ್ಕಾರ ಹೊರಡಿಸಿದ್ದ ನಿಯಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸರ್ಕಾರ ಜನನ ಮತ್ತು ಮರಣ ನೋಂದಣಿ ಪ್ರಕರಣಗಳನ್ನು ನ್ಯಾಯಾಲಯಗಳಿಂದ ಉಪವಿಭಾಗಾಧಿಕಾರಿಗೆ ವರ್ಗಾಯಿಸಿ ಕರ್ನಾಟಕ ಜನನ ಮತ್ತು ಮರಣ ತಿದ್ದುಪಡಿ ನಿಯಮ 2022 ಜಾರಿಗೆ ತಂದಿದ್ದು, ಇದಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಕಲಬುರ್ಗಿ ಜಿಲ್ಲೆ ಚಿಂಚೋಳಿಯ ವಕೀಲರ ಸಂಘದ ಸದಸ್ಯ ಹಾಗೂ ಬೀದರ್ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ. ಬಿರಾದಾರ್ ಅವರು ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಮಧ್ಯಂತರ ಆದೇಶ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ, ಸಾಂಖ್ಯಿಕ ಇಲಾಖೆ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಅರ್ಜಿಗೆ ಆಕ್ಷೇಪಣಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.