ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ, ಐದು ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಲಿದೆ ಎಂಬ ಮಾತುಗಳ ಮಧ್ಯೆ ಕೇಳಿ ಬಂದ ಹೆಚ್ಚುವರಿ ಡಿಸಿಎಂ ನೇಮಕಾತಿ ಕುರಿತ ಚರ್ಚೆ ಹಲವು ವದಂತಿಗಳಿಗೆ ಗ್ರಾಸ ನೀಡಿತ್ತು.
ಬಹು ಮುಖ್ಯ ಸಂಗತಿ ಎಂದರೆ ಕೆಲ ಸಚಿವರುಗಳೇ ಹೆಚ್ಚುವರಿ ಉಪಮುಖ್ಯಮಂತ್ರಿ ನೇಮಕ ಕುರಿತಂತೆ ಮಾತನಾಡಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತಿತ್ತು. ಇದಕ್ಕೆ ಪೂರಕವಾಗಿ ಪ್ರತಿಪಕ್ಷಗಳ ನಾಯಕರೂ ಸಹ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಒಳ ಜಗಳ ಬೀದಿಗೆ ಬರಲಿದೆ ಎಂದು ಹೇಳಿದ್ದರು. ಅಲ್ಲದೆ ಈ ಸರ್ಕಾರ ಐದು ವರ್ಷ ಪೂರೈಸುವುದು ಅನುಮಾನ ಎಂಬ ಮಾತುಗಳನ್ನಾಡಿದ್ದರು.
ಈ ಎಲ್ಲದರ ನಡುವೆ ನಡೆದ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೊತೆಗೂಡಿ ಎದುರಿಸಲು ಜೆಡಿಎಸ್ ಸಿದ್ಧವಾಗಿದ್ದು, ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಈ ಕಾರಣಕ್ಕೆ ಇದೀಗ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಉಪ ಮುಖ್ಯಮಂತ್ರಿ ನೇಮಕಾತಿ ಕುರಿತ ಚರ್ಚೆಯನ್ನು ಮುಂದುವರೆಸದಂತೆ ಕೈ ನಾಯಕರಿಗೆ ತಾಕೀತು ಮಾಡಿದೆ ಎಂದು ಹೇಳಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಈ ಕುರಿತಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಬೇಕಿದೆ. ಇದರ ಮಧ್ಯೆ ಇಂತಹ ಚರ್ಚೆಗಳ ಕಾರಣಕ್ಕೆ ಸರ್ಕಾರದ ಮೇಲೆ ಅಪನಂಬಿಕೆ ಬರುವ ಸಾಧ್ಯತೆ ಇದೆ. ಪ್ರತಿಪಕ್ಷಗಳು ಸಹ ಇದನ್ನೇ ಬಂಡವಾಳ ಮಾಡಿಕೊಳ್ಳಲಿದ್ದು, ಹೀಗಾಗಿ ಇನ್ನು ಮುಂದೆ ಡಿಸಿಎಂ ಕುರಿತ ಚರ್ಚೆ ಮಾಡಬಾರದು. ಒಂದೊಮ್ಮೆ ಇದನ್ನು ಉಲ್ಲಂಘಿಸಿದರೆ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.