ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ. ಕೂದಲು ಬೆಳ್ಳಗಾಗುವುದು, ಉದುರುವುದು, ಹೊಟ್ಟು, ಒಣ ಕೂದಲು ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಜನರು. ಇದಕ್ಕೆ ಮುಖ್ಯ ಕಾರಣ ಆಹಾರ. ಪೌಷ್ಠಿಕಾಂಶದ ಕೊರತೆಯಿಂದಾಗಿ ಹಾಗೂ ಹಾರ್ಮೋನ್ ನಲ್ಲಾಗುವ ಏರುಪೇರಿನಿಂದಾಗಿ ಅನಾರೋಗ್ಯಕರ ಕೂದಲು ಎಲ್ಲರನ್ನು ಕಾಡ್ತಿದೆ.
ಸುಂದರ ಕೂದಲಿಗಾಗಿ ಹುಡುಗಿಯರು ಸಾಕಷ್ಟು ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಅನೇಕ ಉತ್ಪನ್ನಗಳ ಪ್ರಯೋಗ ಮಾಡ್ತಾರೆ. ಆದ್ರೆ ಈ ಉತ್ಪನ್ನಗಳನ್ನು ಬಳಸಿದ ಕೆಲ ಸಮಯ ಮಾತ್ರ ಸಮಸ್ಯೆ ಕಡಿಮೆಯಾಗುತ್ತದೆ. ಬಳಕೆ ಬಿಟ್ಟ ನಂತ್ರ ಮತ್ತೊಂದು ಸಮಸ್ಯೆ ಶುರುವಾಗುತ್ತದೆ.
ಹಿಂದಿನ ಕಾಲದಲ್ಲಿ ಕೂದಲಿಗೆ ದಾಸವಾಳದ ಹೂವನ್ನು ಔಷಧಿ ರೂಪದಲ್ಲಿ ಬಳಸುತ್ತಿದ್ದರು. ಈ ಮನೆ ಮದ್ದನ್ನು ಈಗಲೂ ಅನೇಕರು ಉಪಯೋಗಿಸ್ತಿದ್ದಾರೆ. ನೀವೂ ದಾಸವಾಳವನ್ನು ಕೂದಲಿಗೆ ಹಚ್ಚಿಕೊಂಡು ಕೂದಲಿನ ಎಲ್ಲ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ಆರೋಗ್ಯಕರ ಕೂದಲಿಗೆ ಎಣ್ಣೆ ಮಸಾಜ್ ಉತ್ತಮ. ಈ ಎಣ್ಣೆಗೆ ದಾಸವಾಳದ ಹೂ ಅಥವಾ ಎಲೆಯನ್ನು ಹಾಕಿ ಹಚ್ಚಿಕೊಂಡ್ರೆ ಅತ್ಯುತ್ತಮ. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ದಾಸವಾಳದ ಹೂವನ್ನು ಹಾಕಿ ರಾತ್ರಿ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಬೆಳಿಗ್ಗೆ ಎದ್ದ ತಕ್ಷಣ ತಲೆಯನ್ನು ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳಿ.
ದಾಸವಾಳ ನೈಸರ್ಗಿಕ ಕಂಡಿಷನರ್ ಕೆಲಸ ಮಾಡುತ್ತದೆ. ಇದನ್ನು ಮೆಹಂದಿ ಜೊತೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ನಿಂಬೆ ಹಣ್ಣಿನ ರಸದ ಜೊತೆ ಮಿಕ್ಸ್ ಮಾಡಿಯೂ ಹಚ್ಚಿಕೊಳ್ಳಬಹುದು.
ದಾಸವಾಳದ ಎಲೆಯನ್ನು ಮೊಟ್ಟೆ ಜೊತೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ನಂತ್ರ ಬೆರಳುಗಳಿಂದ ಮಸಾಜ್ ಮಾಡಿ. ಇದು ನಿಮ್ಮ ಕೂದಲನ್ನು ಸುಂದರವಾಗಿಸುವ ಜೊತೆಗೆ ಕಪ್ಪಾಗಿಸುತ್ತದೆ.