ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. ಆದ್ರೆ ಇದರಿಂದ ಕೂದಲು ಬೆಳೆಯುವ ಬದಲು ಮತ್ತಷ್ಟು ಕೂದಲು ಉದುರಲು ಕಾರಣವಾಗುತ್ತದೆ.
ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು ನೆರವಾಗುತ್ತದೆ.
ದಾಸವಾಳದ ಜೊತೆ ಬೇರೆ ಬೇರೆ ಉತ್ಪನ್ನಗಳನ್ನು ಬೆರೆಸಿ ಮಾಸ್ಕ್ ತಯಾರಿಸಿಕೊಂಡು ಬಳಸಬಹುದಾಗಿದೆ.
ದಾಸವಾಳ-ಈರುಳ್ಳಿ : ದಾಸವಾಳದ ರಸ, ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ತೊಳೆಯಿರಿ.
ದಾಸವಾಳ–ನೆಲ್ಲಿ : ದಾಸವಾಳ ಹಾಗೂ ನೆಲ್ಲಿ ರಸವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ದಾಸವಾಳ – ಆಲಿವ್ ಆಯ್ಲ್ : ಇದನ್ನು ಶಾಂಪೂ ರೀತಿಯಲ್ಲಿಯೂ ಬಳಸಬಹುದು. ದಾಸವಾಳದ ಎಲೆ ಹಾಗೂ ಹೂವನ್ನು ಮಿಶ್ರಮಾಡಿ ಅದಕ್ಕೆ ಸ್ವಲ್ಪ ಹನಿ ಆಲಿವ್ ಆಯಿಲ್ ಮಿಕ್ಸ್ ಮಾಡಿ ಬಳಸಿ.
ದಾಸವಾಳ-ಕರಿಬೇವು : ದಾಸವಾಳ ಹಾಗೂ ಕರಿಬೇವಿನ ಎಲೆಯ ರಸಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ.
ದಾಸವಾಳ – ಮೆಂತ್ಯೆ : ಮೆಂತ್ಯೆಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಮೆಂತ್ಯೆ ಜೊತೆ ದಾಸವಾಳ ಸೇರಿಸಿ ಮಿಕ್ಸಿ ಮಾಡಿ. ಇದನ್ನು ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಈ ಮಿಶ್ರಣದಿಂದ ಕೂದಲು ಹೊಳಪು ಪಡೆಯುವ ಜೊತೆಗೆ ಕೂದಲು ಉದುರುವುದು ಕಡಿಮೆಯಾಗುತ್ತದೆ.