ಬೆಂಗಳೂರು : ಹೇ..ಅಶೋಕ..ಹೇ..ವಿಜಯೇಂದ್ರ..! ನಿಮಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೇಕೇ? ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದರು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಬೃಹತ್ ಜನಾಂದೋಲನ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.
ಬಿಡದಿಯಿಂದ ಮೈಸೂರಿನವರೆಗೆ ಬಂದಿರುವ ಈ ಜನಾಂದೋಲನ ನಮ್ಮ ನ್ಯಾಯ ಪರ ಹೋರಾಟದ ದಿಟ್ಟ ಹೆಜ್ಜೆಯಾಗಿದೆ. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿ ದಿನದಂದು ಈ ಕಾರ್ಯಕ್ರಮ ನಡೆಯುತ್ತಿರುವುದು ಐತಿಹಾಸಿಕ. ಅಂದು ಬ್ರಿಟಿಷರ ವಿರುದ್ಧ ನಮ್ಮ ಹೋರಾಟ, ಇಂದು ಬಿಜೆಪಿ, ಜೆಡಿಎಸ್ ಅವರ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ದೇಶದ ರಕ್ಷಣೆ ಹಾಗೂ ಸಂವಿಧಾನದ ಉಳಿವಿಗಾಗಿ ಈ ಚಳುವಳಿಯನ್ನ ನಾವು ಪ್ರಾರಂಭ ಮಾಡಿದ್ದೇವೆ.
ಬಿಜೆಪಿ, ಜೆಡಿಎಸ್ ಅವರ ಪಾದ ಯಾತ್ರೆ, ಅವರು ಮಾಡಿದ ಪಾಪ ವಿಮೋಚನೆಯ ಯಾತ್ರೆ. ನಮ್ಮದು ಅಧರ್ಮೀಯರ ವಿರುದ್ಧ ಧರ್ಮ ಯುದ್ಧ, ನಮ್ಮದು ಅನ್ಯಾಯದ ವಿರುದ್ಧ ನ್ಯಾಯ ಯುದ್ಧ, ನಮ್ಮದು ಅಸತ್ಯದ ವಿರುದ್ಧ ಸತ್ಯದ ಯುದ್ಧ.
ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರೇ ಹಿಂದೆ ಆಪರೇಷನ್ ಕಮಲ ಮಾಡಿ ಅನೇಕ ಸರ್ಕಾರಗಳನ್ನು ಬೀಳಿಸಿದ್ರಿ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರೇ ನಿಮ್ಮ ಮುಖಂಡತ್ವದಲ್ಲಿ ಕೇವಲ 19 ಸೀಟುಗಳನ್ನು ಮಾತ್ರ ಗೆದ್ರಿ, ಆದರೆ ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದ್ರೂ ಕೂಡಾ ದೇಶದಲ್ಲಿ ಕಾಂಗ್ರೆಸ್ ತೆಗೆದುಹಾಕೋದಕ್ಕೆ ಆಗಲಿಲ್ಲ. ಹೀಗಿರುವಾಗ ಬಿಜೆಪಿ, ಜೆಡಿಎಸ್ ಅವರು ಏನೇ ಕುತಂತ್ರ ಮಾಡಿದ್ರು ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲು ಆಗುವುದಿಲ್ಲ. ಇವತ್ತು ನಿಮಗೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕೇ? ನಾನು ಹಾಗೂ 136 ಶಾಸಕರು ಅವರ ಜೊತೆ ಇರೋವರೆಗೂ ಇದು ಎಂದಿಗೂ ಸಾಧ್ಯವಿಲ್ಲ. ನಮ್ಮ ಸರ್ಕಾರ ಭದ್ರವಾಗಿ ಇರಲಿದೆ ಹಾಗೂ ಭ್ರಷ್ಟರ ವಿರುದ್ಧ ಹೋರಾಟ ನಡೆಸಲಿದೆ ಎಂದರು.