
ಸಿ ಎಸ್ ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಇದೇ ಕೊನೆಯ ಐಪಿಎಲ್, ಮುಂದಿನ ಐಪಿಎಲ್ ನಲ್ಲಿ ಅವರು ಆಡ್ತಾರಾ ಅಥವಾ ನಿವೃತ್ತಿ ಘೋಷಿಸ್ತಾರಾ ಎಂಬ ಚರ್ಚೆ ಕ್ರಿಕೆಟ್ ಅಂಗಳ ಸೇರಿದಂತೆ ಅವರ ಅಭಿಮಾನಿಗಳಲ್ಲಿ ಜೋರಾಗೇ ನಡೀತಿದೆ.
ಈ ಬಗ್ಗೆ ಇದುವರೆಗೂ ಧೋನಿ ಸ್ಪಷ್ಟ ಉತ್ತರ ನೀಡದಿದ್ರೂ ಐಪಿಎಲ್ 2023 ರ ಫೈನಲ್ ಬಳಿಕ ಅವರು ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಎಂ ಎಸ್ ಡಿ ನಿವೃತ್ತಿ ಚರ್ಚೆ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಕ್ರಿಯಿಸಿದ್ದು ಇಂತಹ ಚರ್ಚೆ ಅಪ್ರಸ್ತುತ ಎಂದಿದ್ದಾರೆ.
ಧೋನಿ ಬಗ್ಗೆ ನಿವೃತ್ತಿಯ ಮಾತುಕತೆಗಳನ್ನು ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ . ಐಪಿಎಲ್‌ನಲ್ಲಿ 15 ವರ್ಷಗಳ ಸುದೀರ್ಘ ಸೇವೆಗಾಗಿ ಅವರ ಅಭಿಮಾನಿಗಳು ಕೃತಜ್ಞರಾಗಿರಬೇಕು ಎಂದು ಹೇಳಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ನ ಕೊನೆಯಲ್ಲಿ ಧೋನಿ ವಿದಾಯ ಹೇಳಿದರೂ, ಅವರು ಅತ್ಯಂತ ಪ್ರಭಾವಶಾಲಿ ಆಟಗಾರರಾಗಿ ಕ್ರೀಡೆಯನ್ನು ತೊರೆದಿದ್ದಾರೆ ಎಂಬ ಅಂಶವನ್ನು ವಿಶ್ವ ಕ್ರಿಕೆಟ್ ಶ್ಲಾಘಿಸಬೇಕು ಎಂದು ಹೇಳಿದರು.
ಅವರು 15 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ. ನಾವು ಧೋನಿ ಬಗ್ಗೆ ಮಾತ್ರ ಏಕೆ ಮಾತನಾಡುತ್ತಿದ್ದೇವೆ ? ಅವರು ತಮ್ಮ ಕೆಲಸವನ್ನು ಮಾಡಿದ್ದಾರೆ. ಅವರಿಂದ ನಮಗೆ ಇನ್ನೇನು ಬೇಕು ? ಅವರು ತನ್ನ ಜೀವನದುದ್ದಕ್ಕೂ ಆಡಬೇಕೆಂದು ನಾವು ಬಯಸುತ್ತೇವೆಯೇ ? ಹಾಗಾಗುವುದಿಲ್ಲ. ಬದಲಿಗೆ ಅವರು 15 ವರ್ಷಗಳ ಕಾಲ ಆಡಿದ್ದಕ್ಕೆ ನಾವು ಕೃತಜ್ಞರಾಗಿರಬೇಕು. ಮುಂದಿನ ವರ್ಷ ಆಡಲಿ ಬಿಡಲಿ, ನಿರ್ಗಮಿಸುವ ಮುನ್ನ ಆಕರ್ಷಕವಾಗಿ ಆಡಿದ್ದಾರೆ. ಅವರು ದೊಡ್ಡ ರನ್ ಗಳಿಸದೇ ಇರಬಹುದು ಆದರೆ ಅವರು ತಂಡವನ್ನು ಫೈನಲ್‌ಗೆ ಮುನ್ನಡೆಸಿದರು ಮತ್ತು ಇದು ಕ್ರಿಕೆಟ್ ಆಟದಲ್ಲಿ ನಾಯಕನ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಭಾನುವಾರ ಮೇ 28 ರಂದು ನಡೆಯಬೇಕಿದ್ದ ಐಪಿಎಲ್ ಪಂದ್ಯ ಮಳೆಯ ಕಾರಣದಿಂದ ಸೋಮವಾರಕ್ಕೆ ಮುಂದೂಡಲಾಗಿದೆ. ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಕಪ್ ಗಾಗಿ ಅಂತಿಮ ಹೋರಾಟ ನಡೆಯಲಿದೆ.