ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ಆಮದು ಮಾಡಿಕೊಳ್ಳಲಾದ ವಸ್ತುಗಳ ಬಳಕೆ ಮೂಲಕ ಹೀರೋ ಎಲೆಕ್ಟ್ರಿಕ್ ನಿಯಮಗಳ ಉಲ್ಲಂಘನೆ ಮಾಡಿರುವ ಶಂಕೆ ಮೇಲೆ ಭಾರೀ ಕೈಗಾರಿಕೆ ಸಚಿವಾಲಯ ತನಿಖೆಗೆ ಮುಂದಾಗಿದೆ.
ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ (ಫೇಮ್) ಕಾರ್ಯಕ್ರಮದಡಿ ಸಬ್ಸಿಡಿ ಪಡೆಯಬೇಕಾದಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡ ಬಂದಲ್ಲಿ ದ್ವಿಚಕ್ರ ವಾಹನ ಉತ್ಪಾದಕ ಸರ್ಕಾರಕ್ಕೆ 150-200 ಕೋಟಿ ರೂ.ಗಳನ್ನು ಮರಳಿ ನೀಡಬೇಕಾಗುತ್ತದೆ. ಅಲ್ಲದೇ ಯೋಜನೆಯಡಿ ಭವಿಷ್ಯದಲ್ಲಿ ಯಾವುದೇ ಸಬ್ಸಿಡಿ ಪಡೆಯಲು ಅನರ್ಹಗೊಳ್ಳುವ ಸಾಧ್ಯತೆಯೂ ಇದೆ.
ವರದಿಗಳ ಪ್ರಕಾರ 13 ಕಂಪನಿಗಳು ತನಿಖೆಗೆ ಒಳಪಟ್ಟಿವೆ – ಲೋಹಿಯಾ ಆಟೋ, ಬೆನ್ಲಿಂಗ್, ಒಕಾಯಾ ಇವಿ, ವಿಕ್ಟರಿ ಇವಿ, ಕೈನೆಟಿಕ್ ಗ್ರೀನ್ ಎನರ್ಜಿ, ಎವಾನ್ ಸಯಕಲ್ಸ್ ಮತ್ತು ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಈ ಪಟ್ಟಿಯಲ್ಲಿವೆ.
ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡಲು ಸ್ಥಳೀಯ ಉತ್ಪಾದನೆ ಸಂಬಂಧ ಇದ್ದ ನಿಯಮಾವಳಿಯನ್ನು ಉಲ್ಲಂಘಿಸಿರುವ ಸಂಬಂಧ ವಾಹನ ತಪಾಸಣಾ ಏಜೆನ್ಸಿಗೆ ಈ ಸಂಬಂಧ ಪರಿಶೀಲನೆ ಮಾಡಲು ಸಚಿವಾಲಯ ಆದೇಶಿಸಿದೆ. ಇದೇ ವೇಳೆ, ತಪ್ಪು ಮಾಹಿತಿ ಕೊಟ್ಟು ಪಡೆಯಲಾದ ಸಬ್ಸಿಡಿಗಳ ವಿಚಾರವಾಗಿಯೂ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.
ಆದರೆ ಈ ವಿಚಾರವನ್ನು ಅಲ್ಲಗಳೆದಿರುವ ಹೀರೋ, ಈ ಸಂಬಂಧ ತನಗೆ ಯಾವುದೇ ನೋಟಿಸ್ ಅಥವಾ ಪತ್ರ ಸರ್ಕಾರದಿಂದ ಬಂದಿಲ್ಲ ಎಂದಿದೆ.
ಟಿವಿಎಸ್, ಅಥೆರ್ ಎನರ್ಜಿ ಹಾಗೂ ಹೀರೋ ಮೋಟೋಕಾರ್ಪ್ ವಿರುದ್ಧವೂ ಸಹ ಫೇಮ್ ನಿಯಮಾವಳಿ ಉಲ್ಲಂಘನೆ ಮಾಡಿ ಚಾರ್ಜರ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಿರುವ ಆಪಾದನೆಗಳು ಕೇಳಿ ಬಂದಿವೆ. ಈ ಸಂಬಂಧ ಇವಿ ಉತ್ಪಾದಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಬಳಿಕ ಅಥೆರ್ ಹಾಗೂ ಓಲಾ ತಮ್ಮ ಗ್ರಾಹಕರಿಗೆ ಚಾರ್ಜರ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿವೆ.
ಎಲೆಕ್ಟ್ರಿಕ್ ವಾಹನಗಳ ದೇಶೀ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ 10,000 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನಗೆ ಚಾಲನೆ ನೀಡಲಾಗಿದೆ. ಇಲ್ಲಿವರೆಗೂ ಯೋಜನೆಗೆಂದು ತೆಗೆದಿರಿಸಿದ ನಿಧಿಯಲ್ಲಿ 3,701 ಕೋಟಿ ರೂ.ಗಳನ್ನು ಬಳಸಲಾಗಿದೆ. 24ರ ವಿತ್ತೀಯ ವರ್ಷಕ್ಕೆ ಇದಕ್ಕೆಂದು 5,712 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.