ಹಾಸನ : ಒಂಟಿ ಸಲಗದೊಂದಿಗೆ ಕಾದಾಡಿ ವೀರ ಮರಣ ಹೊಂದಿದ ಮೈಸೂರಿನ ಆನೆ ಅರ್ಜುನನ ಅಂತ್ಯಕ್ರಿಯೆ ಇಂದು ಹಾಸನದಲ್ಲಿ ನೆರವೇರಿದೆ.
ಮೈಸೂರಿನಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ಅಂತ್ಯಕ್ರಿಯೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದಲ್ಲಿ ನೆರವೇರಿದೆ. ವೀರ ಮರಣ ಅಪ್ಪಿದ ಆನೆ ಅರ್ಜುನನಿಗೆ ಭಾವುಕ ವಿದಾಯ ಹೇಳಲಾಗಿದೆ. ಜೆಸಿಬಿ ಮೂಲಕ ಬೃಹತ್ ಆಕಾರದ ಗುಂಡಿ ತೋಡಿ ನಂತರ ಆನೆಯನ್ನು ಅಂತ್ಯಸಂಸ್ಕಾರ ಮಾಡಲಾಗಿದೆ. ಈ ವೇಳೆ ನೆರೆದಿದ್ದ ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿಗಳು ಕಂಬನಿ ಮಿಡಿದರು. ಈ ಮೂಲಕ ಅರ್ಜುನ ಮಣ್ಣಲ್ಲಿ ಮಣ್ಣಾಗಿದ್ದಾನೆ.
8 ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿಯಾಗಿದೆ. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ.
ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ.
ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಕೂಡಾ ಪಡೆದಿತ್ತು.
ಅರ್ಜುನ ಆನೆ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜನರ ಮನವೊಲಿಕೆಗೆ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪ್ರತಿಭಟನೆಯನ್ನು ತೀವ್ರಗೊಳಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಿದ್ದರು.