
ಪಾದಚಾರಿಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ದುರ್ಬಲರಾದ ರಸ್ತೆ ಬಳಕೆದಾರರು ಎಂದರೆ ದ್ವಿಚಕ್ರ ವಾಹನ ಸವಾರರು, ಅದರಲ್ಲೂ ಬೈಸಿಕಲ್ ಸವಾರರು. ಸರ್ಕಾರಿ ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತಗಳ ಪೈಕಿ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರದ್ದೇ ಪಾಲಿದೆ.
2022 ರ ಕ್ರಿಸ್‌ಮಸ್ ವೇಳೆ ಸಂಭವಿಸಿದ ಇಂಥ ಒಂದು ದುರಂತದಲ್ಲಿ ಲಖನೌನ ಅಮೀನಾಬಾದ್‌ನ ಖುಷಿ ಪಾಂಡೆ ತನ್ನ ತಾಯಿ ಕಡೆಯ ಅಜ್ಜನನ್ನು ಕಳೆದುಕೊಂಡಿದ್ದಾರೆ. ಈ ದುರಂತದ ಬಳಿಕ 22 ವರ್ಷದ ಖುಷಿ ತಮ್ಮ ನಗರದಲ್ಲಿರುವ ಎಲ್ಲ ಬೈಸಿಕಲ್ ಗಳಿಗೂ ಬೈಕ್ ಲೈಟ್ ಹಾಕುವ ಅಭಿಯಾನಕ್ಕೆ ಮುಂದಾಗಿದ್ದಾರೆ.
“ನನ್ನ ಅಜ್ಜ ಕ್ರಿಸ್ಮಸ್ ಸಂದರ್ಭದಲ್ಲಿ ಅಮೀನಾಬಾದ್‌ನಿಂದ ಮರಳುತ್ತಿದ್ದ ವೇಳೆ ಅಪಘಾತಕ್ಕೀಡಾದರು. ಬೈಸಿಕಲ್ ಚಲಾಯಿಸುತ್ತಿದ್ದ ಅವರಿಗೆ ವಾಹನವೊಂದು ಬಂದು ಗುದ್ದಿದೆ. ಅವರು ಸ್ಥಳದಲ್ಲೇ ಮೃತಪಟ್ಟರು. ನಾನು ಸಮಾಜದಲ್ಲಿ ಬಹಳಷ್ಟು ಮಂದಿಗೆ ಸಹಾಯ ಮಾಡಿದರೂ ಸಹ ನನ್ನ ತಾತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ” ಎಂದು ಖುಷಿ ಹೇಳಿದ್ದಾರೆ.
ಹೀಗಾಗಿ ಮಂಜುಭರಿತ ವಾತಾವರಣದಲ್ಲೂ ಸಹ ಸ್ಪಷ್ಟವಾಗಿ ಕಾಣಲಿ ಎಂದು ಬೈಸಿಕಲ್ ಗಳಿಗೆ ಈ ಲೈಟ್‌ಗಳನ್ನು ಅಳವಡಿಸುತ್ತಿರುವುದಾಗಿ ಖುಷಿ ಹೇಳುತ್ತಾರೆ.
“ನಾವು ಜನವರಿ 13, 2023 ರಿಂದ ಆರಂಭಿಸಿ ಇದುವರೆಗೂ ನಗರದಲ್ಲಿರುವ 500 ಕ್ಕೂ ಹೆಚ್ಚು ಬೈಸಿಕಲ್ ಗಳಿಗೆ ಲೈಟ್ ಗಳನ್ನು ಅಳವಡಿಸಿದ್ದೇವೆ. ನನ್ನ ಈ ಅಭಿಯಾನವನ್ನು ನಗರದ ವಿವಿಧ ಪ್ರದೇಶಗಳಲ್ಲಿ ಮುಂದುವರೆಸಲು ನನಗೆ ಅನೇಕರು ಪ್ರೋತ್ಸಾಹಿಸುತ್ತಿದ್ದಾರೆ. ನಾನು ಈಗ ಸೀಮಿತ ಹಣದಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ಯಾವುದಾದರೂ ಸಂಸ್ಥೆಗಳಿಂದ ನಮಗೆ ಆರ್ಥಿಕ ನೆರವು ಸಿಕ್ಕಲ್ಲಿ ನಮ್ಮ ಈ ಸಾಮಾಜಿಕ ಸೇವೆಯನ್ನು ಬೇರೆ ನಗರಗಳಿಗೂ ಸಹ ವಿಸ್ತರಿಸುತ್ತೇವೆ. ನಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡಲು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ” ಎಂದು ಖುಷಿ ತಿಳಿಸಿದ್ದಾರೆ.
ದೇಶದಲ್ಲಿ ಸಂಭವಿಸಿದ ಒಟ್ಟು ಅಪಘಾತಗಳ ಪೈಕಿ 46.3% ನಷ್ಟರಲ್ಲಿ ಬೈಕರ್‌ಗಳು ಒಳಗೊಂಡಿದ್ದಾರೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಂಕಿ ಅಂಶಗಳು ತಿಳಿಸುತ್ತವೆ. ಜಗತ್ತಿನಾದ್ಯಂತ ಸಂಭವಿಸುವ ಅರ್ಧದಷ್ಟು ರಸ್ತೆ ಅಪಘಾತಗಳಲ್ಲಿ ಮೋಟಾರ್ ಸೈಕ್ಲಿಸ್ಟ್‌ಗಳು, ಸೈಕ್ಲಿಸ್ಟ್‌ಗಳು ಹಾಗೂ ಪಾದಚಾರಿಗಳು ಭಾಗಿಯಾಗಿದ್ದಾರೆ ಎಂದು ಸೇವ್ ಲೈಫ್ ಪ್ರತಿಷ್ಠಾನದ ಗ್ಲೋಬಲ್ ರೋಡ್ ಸೇಫ್ಟಿ 2015 ವಿಶ್ಲೇಷಣೆ ತಿಳಿಸಿದೆ.
ಖುಷಿ ಪಾಂಡೆ, ರಾಮ್‌ಸ್ವರೂಪ್ ಮೆಮೋರಿಯಲ್ ವಿವಿಯಲ್ಲಿ ಬಿಬಿಎ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ತಾವು ಅದಾಗಲೇ ಬಹುವಿಧದ ಕಾರ್ಯಗಳ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ ಖುಷಿ.
ಯುಪಿಎಸ್‌ಸಿ ಸಿವಿಲ್ ಸೇವೆಗಳ ಅಭ್ಯರ್ಥಿಗಳಿಗೆ ಕೋಚಿಂಗ್, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳು, ಕಾರ್ಪೋರೇಟ್ ಪ್ರಮೋಷನಲ್ ಚಿತ್ರಗಳು ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ತಾತ್ಕಾಲಿಕ ಕೆಲಸಗಳನ್ನು ಮಾಡುವ ಮೂಲಕ ಜೀವನಮಾರ್ಗಗಳನ್ನು ಕಂಡುಕೊಂಡಿದ್ದಾರೆ ಖುಷಿ.
https://youtu.be/XqdFdmzn8kc