ಲಿಚಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳಿರುವ ಕಾರಣ ಇದನ್ನು ಮಿತವಾಗಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಲಿಚಿ ಹಣ್ಣಿನ ಸಿಪ್ಪೆಗಳನ್ನು ನಾವು ಉಪಯೋಗವಿಲ್ಲವೆಂದು ಎಸೆಯುತ್ತೇವೆ. ಆದರೆ ಈ ಲಿಚಿ ಹಣ್ಣಿನ ಸಿಪ್ಪೆಯನ್ನು ಬಳಸಿ ನಿಮ್ಮ ತ್ವಚೆಯ ಆರೈಕೆ ಮಾಡಬಹುದಂತೆ.
ಲಿಚಿ ಹಣ್ಣಿನ ಸಿಪ್ಪೆಯನ್ನು ಸ್ಕ್ರಬ್ ರೂಪದಲ್ಲಿ ಬಳಸಬಹುದು. ಇದು ಚರ್ಮದಲ್ಲಿ ಸಂಗ್ರಹವಾದ ಕೊಳೆ, ಸತ್ತ ಚರ್ಮವನ್ನು ನಿವಾರಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಲಿಚಿ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ವಾರದಲ್ಲಿ ಒಮ್ಮೆ ಈ ಪುಡಿಗೆ ಮೊಸರು ಮತ್ತು ಅಲೋವೆರಾವನ್ನು ಬೆರೆಸಿ ಸ್ಕ್ರಬ್ ತಯಾರಿಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.
ಹಾಗೇ ಕುತ್ತಿಗೆಯಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸಲು ಲಿಚಿ ಹಣ್ಣಿನ ಸಿಪ್ಪೆ ಸಹಕಾರಿಯಾಗಿದೆ. ಹಾಗಾಗಿ ಒಂದು ಚಮಚ ಲಿಚಿ ಹಣ್ಣಿನ ಸಿಪ್ಪೆಯ ಪುಡಿಗೆ ಅರ್ಧ ಚಮಚ ಅಡುಗೆ ಸೋಡಾ, ಅರ್ಧ ಚಮಚ ಲವಂಗದೆಣ್ಣೆ, ಒಂದು ಚಿಟಿಕೆ ಅರಿಶಿನ ಮತ್ತು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿ ಕುತ್ತಿಗೆ ಭಾಗಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಲಘುವಾಗಿ ಉಜ್ಜಿದರೆ ಕಪ್ಪು ಕಲೆ ಮಾಯವಾಗುತ್ತದೆ.
ಬಿಸಿಲಿನಿಂದಾದ ಟ್ಯಾನ್ ಅನ್ನು ನಿವಾರಿಸಲು ಒಂದು ಚಮಚ ಲಿಚಿ ಹಣ್ಣಿನ ಸಿಪ್ಪೆಯ ಪುಡಿಗೆ ಅರ್ಧ ಚಮಚ ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಮಿಶ್ರಣ ಮಾಡಿ ಟ್ಯಾನ್ ಆದ ಜಾಗಕ್ಕೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿ ನಂತರ ಅಲೋವೆರಾ ಜೆಲ್ ಹಚ್ಚಿ.
ಇಷ್ಟೇಲ್ಲಾ ಪ್ರಯೋಜನಕಾರಿಯಾಗಿರುವಂತಹ ಲಿಚಿ ಹಣ್ಣಿನ ಸಿಪ್ಪೆಯನ್ನು ಇನ್ನು ಮುಂದೆ ಎಸೆಯ ಬದಲು ಸಂಗ್ರಹಿಸಿ ಅದರ ಪ್ರಯೋಜನ ಪಡೆಯಿರಿ.