ಅಡುಗೆ ಮಾಡುವುದಕ್ಕೆ ಏನೂ ಇಲ್ಲದೇ ಇದ್ದಾಗ ಮನೆಯಲ್ಲಿ ಒಂದಷ್ಟು ತೊಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ತೊಂಡೆಕಾಯಿ ಫ್ರೈ ಮಾಡಿಕೊಂಡು ಮೊಸರು ಹಾಕಿಕೊಂಡು ಊಟ ಮಾಡಿ ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿ:
ತೊಂಡೆಕಾಯಿ – 1/2 ಕೆಜಿ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಒಣ ಕೊಬ್ಬರಿ ಪುಡಿ – 2 ಟೇಬಲ್ ಸ್ಪೂನ್, ಎಳ್ಳು – 1 ¼ ಟೇಬಲ್ ಸ್ಪೂನ್, ಕೊತ್ತಂಬರಿ ಬೀಜ – 1 ½ ಟೇಬಲ್ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಒಣಮೆಣಸು – 3, ಕಡಲೆಬೇಳೆ – 2 ಟೇಬಲ್ ಸ್ಪೂನ್, ಇನ್ನು ಒಗ್ಗರಣೆಗೆ – ಸಾಸಿವೆ-1/2 ಟೀ ಸ್ಪೂನ್, ಇಂಗು – 1/4 ಟೀ ಸ್ಪೂನ್, ಕರಿಬೇವು – 6 ಎಸಳು.
ಮಾಡುವ ವಿಧಾನ:
ಮೊದಲಿಗೆ ತೊಂಡೆಕಾಯಿಯನ್ನು ಚೆನ್ನಾಗಿ ತೊಳೆದು ಅದನ್ನು ನಾಲ್ಕು ಭಾಗವಾಗಿ ಉದ್ದಕ್ಕೆ ಸೀಳಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ನಂತರ ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ ಹಾಕಿ 4 ನಿಮಿಷಗಳ ಕಾಲ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಒಣಮೆಣಸು, ಎಳ್ಳು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ನಂತರ ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಒಣಮೆಣಸು, ಎಳ್ಳು, ಒಣಕೊಬ್ಬರಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಸೀಳಿಕೊಂಡ ತೊಂಡೆಕಾಯಿಯ ಮಧ್ಯಭಾಗಕ್ಕೆ ತುಂಬಿಕೊಂಡು ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ.
ನಂತರ ಸಾಸಿವೆ, ಇಂಗು, ಅರಿಶಿನ ಪುಡಿ, ಕರಿಬೇವು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಬಳಿಕ ತೊಂಡೆಕಾಯಿಯನ್ನು ಪ್ಯಾನ್ ಗೆ ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಆಮೇಲೆ ಒಂದು ಮುಚ್ಚಳ ಮುಚ್ಚಿ 25 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು ತೊಂಡೆಕಾಯಿಯನ್ನು ಇನ್ನೊಂದು ಬದಿಗೆ ಮಗುಚಿಕೊಳ್ಳಿ. ಎರಡು ಕಡೆ ಚೆನ್ನಾಗಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ.