ಜೂನ್ 7ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ದೀಪಾವಳಿವರೆಗೂ ವಿಸ್ತರಿಸುವುದಾಗಿ ಹೇಳಿದ್ದಾರೆ.
ಸರ್ಕಾರದ ಈ ಸ್ಕೀಂನಿಂದ ದೇಶದ 80 ಕೋಟಿಗೂ ಅಧಿಕ ಮಂದಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಘೋಷಿಸಿದ್ದರು.
ಈ ಯೋಜನೆ ಮೂಲಕ ಕಡಿಮೆ ಆದಾಯವಿರುವ ಮಂದಿಗೆ ಐದು ಕೆಜಿ ಅಕ್ಕಿ/ಗೋಧಿ ಹಾಗೂ ಒಂದು ಕೆಜಿ ಧಾನ್ಯಗಳನ್ನು ಪೂರೈಕೆ ಮಾಡಲಾಗುವುದು. ಮೇ-ಜೂನ್ 2021 ರಲ್ಲಿ ಈ ಸ್ಕೀಂ ಅನ್ನು ಎರಡನೇ ಬಾರಿಗೆ ಲಾಂಚ್ ಮಾಡಲಾಗಿದ್ದು, ಕೋವಿಡ್ ಸಾಂಕ್ರಮಿಕದ ಎರಡನೇ ಅಲೆಯ ವಿರುದ್ಧ ಹೋರಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಎರಡು ತಿಂಗಳಲ್ಲೇ ಮೇಲ್ಕಂಡ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ 25,332.92 ಕೋಟಿ ರೂ.ಗಳ ಹೊರೆ ಬೀಳಲಿದ್ದು ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ವಿತ್ತೀಯ ಹೊರೆ ಬೀಳಲಿದೆ.
ಪ್ರತಿಯೊಬ್ಬ ವ್ಯಕ್ತಿಗೂ 5ಕೆಜಿ ಗೋಧಿ ಮತ್ತು 5 ಕೆಜಿ ಅಕ್ಕಿಯನ್ನು 2-3/ಕೆಜಿ ದರದಂತೆ ಸಬ್ಸಿಡಿ ಬೆಲೆಯಲ್ಲಿ ವಿತರಿಸಲಾಗುವ ಈ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿ ತರಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆಂದು ಈ ಮುಂಚೆ ನರೇಂದ್ರ ಮೋದಿ ಸರ್ಕಾರ 170 ಕೋಟಿ ರೂ.ಗಳನ್ನು ತೆಗೆದಿರಿಸಿತ್ತು.
ರೇಷನ್ ಕಾರ್ಡ್ ಇರುವ ಮಂದಿ ಹಾಗೂ ಅಂತ್ಯೋದಯ ಅನ್ನ ಯೋಜನೆ ಸ್ಕೀಂನೊಂದಿಗೆ ಗುರುತಿಸಲ್ಪಟ್ಟವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಾಗಬಲ್ಲವರಾಗಿದ್ದಾರೆ. ಇದಕ್ಕಾಗಿ ಫಾರಂಗಳನ್ನು ಭರ್ತಿ ಮಾಡಿ, ತಮ್ಮ ಪಾಲಿನ ಅಕ್ಕಿ ಹಾಗೂ ಗೋಧಿ ಪಡೆಯಲು ಸರತಿಯಲ್ಲಿ ನಿಲ್ಲಬೇಕಿದೆ.