ಹಬ್ಬ ಹತ್ತಿರ ಬರ್ತಿದೆ. ಮನೆ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮನೆ ಎಂದಾಗ ಮೊದಲು ನೆನಪಾಗುವುದು ಅಡುಗೆ ಮನೆ. ಅಡುಗೆ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿಯ ತನಕ ಹೆಚ್ಚು ಬಳಕೆಯಾಗುವುದು ಒಲೆ. ಒಲೆಯ ಮೇಲೆ ಬೀಳುವ ಹಾಲು, ಟೀ, ಎಣ್ಣೆ ಮುಂತಾದವುಗಳನ್ನು ಸ್ವಚ್ಛಗೊಳಿಸುವುದು ಸುಲಭವಲ್ಲ. ಆದ್ರೆ ಆರೋಗ್ಯ ದೃಷ್ಟಿಯಿಂದ ಗ್ಯಾಸ್ ಒಲೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಗ್ಯಾಸ್ ಒಲೆ ಸ್ವಚ್ಛಗೊಳಿಸುವ ವೇಳೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಸುಲಭವಾಗಿ ಒಲೆ ಕ್ಲೀನ್ ಮಾಡುವ ವಿಧಾನ ಇಲ್ಲಿದೆ.
ಒಲೆಯನ್ನು ಸ್ವಚ್ಛಗೊಳಿಸಲು ವಿನೆಗರ್ ಬಹಳ ಉಪಯುಕ್ತ. ಒಂದು ಸ್ಪ್ರೇ ಬಾಟಲಿಯಲ್ಲಿ ವಿನೆಗರ್ ಮತ್ತು ನೀರನ್ನು 1:2 ಪ್ರಮಾಣದಲ್ಲಿ ಸೇರಿಸಿ, ಒಲೆಯ ಮೇಲೆ ಚಿಮುಕಿಸಿ ನಂತರ ಬಟ್ಟೆಯಿಂದ ಒರೆಸಿದರೆ ನಿಮ್ಮ ಸ್ಟೋವ್ ಹೊಳೆಯುತ್ತದೆ.
ಪಾತ್ರೆ ತೊಳೆಯುವ ಸೋಪು ಮತ್ತು ಬೇಕಿಂಗ್ ಸೋಡಾವನ್ನು ಸಮಪ್ರಮಾಣದಲ್ಲಿ ಬೆರೆಸಿ ಒಲೆಗೆ ಹಚ್ಚಿ. 5 ನಿಮಿಷ ಹಾಗೇ ಬಿಡಿ. ನಂತರ ಒಲೆಯನ್ನು ಸ್ಪಂಜ್ ಅಥವಾ ಬಟ್ಟೆಯಿಂದ ಒರೆಸಿ, ಒಲೆ ಹೊಳೆಯುತ್ತದೆ.
ಒಲೆಯನ್ನು ಸ್ವಚ್ಛಗೊಳಿಸಲು ಉಪ್ಪು, ಬೇಕಿಂಗ್ ಸೋಡಾ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಿ. ಇದರ ಸಹಾಯದಿಂದ ಒಲೆಯನ್ನು ಒರೆಸಿದರೆ ಅದರ ಮೇಲಿರುವ ಕಲೆಗಳೆಲ್ಲ ಮಾಯವಾಗುತ್ತದೆ.