ನಾನಾ ಕಾರಣಗಳಿಂದ ಬಹುತೇಕ ಎಲ್ಲರಿಗೂ ಈಗ ಬೊಜ್ಜಿನ ಸಮಸ್ಯೆ ಶುರುವಾಗಿದೆ. ತೂಕ ಹೆಚ್ಚಾಗ್ತಿದ್ದಂತೆ ಹೊಟ್ಟೆಯ ಸುತ್ತಲೂ ಕೊಬ್ಬು ಶೇಖರಣೆಯಾಗುತ್ತದೆ. ಈ ಬೊಜ್ಜು ಕರಗಿಸಿ ಬಳುಕುವ ಮೈಮಾಟ ಪಡೆಯಲು ಸುಲಭದ ಡಯಟ್ ಇಲ್ಲಿದೆ.
ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡದಂತಹ ಹಲವಾರು ಕಾಯಿಲೆಗಳಿಗೆ ಬೊಜ್ಜು ಮೂಲವಾಗಿದೆ. ಹೊಟ್ಟೆಯ ಕೊಬ್ಬು ಹೆಚ್ಚಾಗುವುದರಿಂದ ದೇಹದ ಒಟ್ಟಾರೆ ಆಕಾರವೂ ಹದಗೆಡುತ್ತದೆ. ನೀವು ಸಹ ತೆಳ್ಳಗಿನ ಸೊಂಟವನ್ನು ಹೊಂದಲು ಬಯಸಿದರೆ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಖಂಡಿತವಾಗಿಯೂ ಬದಲಾವಣೆಗಳನ್ನು ಮಾಡಿ. ಸೊಂಟ ಈ ರೀತಿ ಅಗಲವಾಗಲು ಒಳಾಂಗಗಳ ಕೊಬ್ಬು ಕಾರಣ.
ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಕಾರಣದಿಂದಾಗಿ ದೇಹದ ಹಾರ್ಮೋನುಗಳು ಅಸಮತೋಲನಗೊಳ್ಳಬಹುದು. ಹಾಗಾಗಿ ಸಸ್ಯ ಆಧಾರಿತ ಆಹಾರಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಕಡಿಮೆ ಕೊಬ್ಬಿನ ಅಂಶವಿರುವ ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಸೊಂಟವನ್ನು ಸ್ಲಿಮ್ ಮಾಡಬಹುದು.
ನಿಮ್ಮ ದಿನನಿತ್ಯದ ಡಯಟ್‌ನಲ್ಲಿ ಬ್ರೊಕೊಲಿ, ಕ್ಯಾರೆಟ್, ಸಿಹಿ ಆಲೂಗಡ್ಡೆ, ಸೊಪ್ಪು ಇವನ್ನು ಹೆಚ್ಚಾಗಿ ಸೇವಿಸಬೇಕು. ಕಿತ್ತಳೆ, ಪೇರಳೆ, ಸೇಬು, ಬಾಳೆಹಣ್ಣುಗಳನ್ನು ತಿನ್ನುವುದು ಉತ್ತಮ. ಮಾಂಸಾಹಾರಿಗಳಾಗಿದ್ದರೆ ಚಿಕನ್, ರೆಡ್ ಮೀಟ್, ಕಾಳುಗಳು ಮತ್ತು ಮೀನನ್ನು ಸೇವಿಸಬಹುದು. ಕ್ವಿನೋವಾ, ಗೋಧಿ, ಬ್ರೌನ್ ರೈಸ್, ಓಟ್ಸ್ ಅನ್ನು ನಿಯಮಿತವಾಗಿ ಸೇವನೆ ಮಾಡಿ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಾದ ಹಾಲು ಮತ್ತು ಮೊಸರನ್ನು ತಿನ್ನಬಹುದು.
ಆಲಿವ್ ಎಣ್ಣೆ, ಅವಕಾಡೊ ತೂಕ ಇಳಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಲಘು ವ್ಯಾಯಾಮ ಮಾಡುವುದು ಸಹ ಅಗತ್ಯವಾಗಿದೆ. ನೀವು ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಂಡರೆ ತೂಕವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಆಹಾರದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬೇಕು, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದರೆ ಅದು ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ.