ಅಕ್ಟೋಬರ್ 17 ರ ಗುರುವಾರದ ಇಂದು ʼಭೂಮಿ ಹುಣ್ಣಿಮೆʼ ಆಚರಿಸಲಾಗುತ್ತಿದೆ. ಭೂಮಿ ಹುಣ್ಣಿಮೆ ಒಂದು ಅಪರೂಪದ ಹಬ್ಬ. ಇದನ್ನು ಸೀಗೆ ಹುಣ್ಣಿಮೆ ಎಂದೂ ಕರೆಯುತ್ತಾರೆ. ಭೂ ತಾಯಿಗೆ ಮಕ್ಕಳು ಈ ದಿನ ವಿಶೇಷ ಪೂಜೆ ಮಾಡುತ್ತಾರೆ. ವರ್ಷಪೂರ್ತಿ ಬೆಳೆ ನೀಡುವ ಭೂ ತಾಯಿಗೆ ರೈತರು ಈ ದಿನ ಪೂಜೆ ಮಾಡಿ ತಾಯಿಗೆ ನಮಿಸುತ್ತಾರೆ.
ಭತ್ತ ಮೊಳಕೆಯೊಡೆಯುವ ಈ ಸಂದರ್ಭದಲ್ಲಿ ಭೂತಾಯಿಗೆ ಮಾಡುವ ಪೂಜೆಯನ್ನು ಸೀಮಂತ ಎಂದೂ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಇದನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಹಬ್ಬವನ್ನು ಬೇರೆ ಬೇರೆ ರೀತಿ ಆಚರಿಸಲಾಗುತ್ತದೆ.
ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಪೂಜೆ ಮಾಡುವ ಗಿಡದ ಬುಡ ಸ್ವಚ್ಛಗೊಳಿಸಿ, ಮಾವಿನ ಎಲೆ, ಬಾಳೆ ಗಿಡದ ಮಂಟಪ ಮಾಡಿ, ಕಲ್ಲಿನ ದೇವರನ್ನು ಮಾಡಿ ಪೂಜೆ ಮಾಡಲಾಗುತ್ತದೆ. ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ ತಾಯಿಗೆ ಅರ್ಪಿಸಲಾಗುತ್ತದೆ. ಭೂತಾಯಿಗೆ ಬಾಗಿನ ನೀಡಿ ಹರಸುವಂತೆ ಪ್ರಾರ್ಥನೆ ಮಾಡುತ್ತಾರೆ ರೈತರು.
ಕೆಲ ಭಾಗಗಳಲ್ಲಿ ಭೂಮಿ ಹುಣ್ಣಿಮೆಗೆ ವಾರದಿಂದಲೇ ತಯಾರಿ ನಡೆಯುತ್ತದೆ. ಹೋಳಿಗೆ, ಸಜ್ಜೆರೊಟ್ಟಿ, ಶೇಂಗಾ ಚಟ್ನಿ, ಶೇಂಗಾ ಹೋಳಿಗೆ ಹೀಗೆ ಬಗೆ ಬಗೆಯ ತಿಂಡಿಗಳನ್ನು ತಾಯಿಗೆ ನೀಡುತ್ತಾರೆ. ಹೊಸ ಬಟ್ಟೆ ತೊಟ್ಟು, ಬಂಗಾರ ಧರಿಸಿ ಭೂತಾಯಿಗೆ ಪೂಜೆ ಮಾಡುವವರನ್ನು ನೋಡುವುದೇ ಒಂದು ಸೊಗಸು.