ಕಾಲಿನಲ್ಲಿ ಅಥವಾ ಕೈಯಲ್ಲಿ ಸತ್ತ ಜೀವಕೋಶಗಳು ಒಟ್ಟಾಗಿ ಆಣಿಯಾಗಿ ಬದಲಾಗುತ್ತವೆ. ಇದರಿಂದ ವಿಪರೀತ ನೋವು ಮಾತ್ರವಲ್ಲ ಕಾಲಿನ ಅಂದವೂ ಹಾಳಾಗುತ್ತದೆ. ಇದನ್ನು ಮನೆಮದ್ದುಗಳ ಮೂಲಕ ಹೇಗೆ ಬಗೆಹರಿಸಬಹುದು?
ಮಣ್ಣಿನಲ್ಲಿ ಹೆಚ್ಚು ಕೆಲಸ ಮಾಡುವವರಿಗೆ, ದನದ ಹಟ್ಟಿಯಲ್ಲಿ ಕೆಲಸ ಮಾಡುವವರಿಗೆ, ಚಪ್ಪಲಿ ಧರಿಸದೆ ನಡೆಯುವವರಿಗೆ ಉಗುರು ಸುತ್ತು ಹಾಗೂ ಕಾಲಿನ ಆಣಿಯಂಥ ಸಮಸ್ಯೆಗಳು ಕಂಡುಬರುತ್ತವೆ. ನಿಂಬೆಹಣ್ಣಿನ ರಸವನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ಆಣಿ ನಿಧಾನವಾಗಿ ಬಿದ್ದು ಹೋಗುತ್ತದೆ.
ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಧಾರಾಳವಾಗಿದ್ದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕನ್ನು ನಿವಾರಿಸಲು ಇದು ಸಮರ್ಥವಾಗಿ ಕೆಲಸ ಮಾಡುತ್ತವೆ. ಬೆಳ್ಳುಳ್ಳಿ ಎಸಳನ್ನು ಜಜ್ಜಿ ರಾತ್ರಿ ಮಲಗುವ ಮುನ್ನ ನಿಮ್ಮ ಕಾಲಿಗೆ ಹಚ್ಚಿಕೊಳ್ಳಿ.
ವಿಟಮಿನ್ ಇ ಆಯಿಲ್ ಅನ್ನು ಕಾಲಿನ ಭಾಗಕ್ಕೆ ಹಚ್ಚಿ ಸಾಕ್ಸ್ ಧರಿಸಿ ಮಲಗಿ. ಈರುಳ್ಳಿಯನ್ನು ಒಲೆಯಲ್ಲಿ ಸುಟ್ಟು ತಣ್ಣಗಾದ ಬಳಿಕ ಜಜ್ಜಿ ಆಣಿ ಇರುವ ಜಾಗಕ್ಕೆ ಬಟ್ಟೆಯಿಂದ ಕಟ್ಟಿ. ಒಂದು ವಾರ ಸತತವಾಗಿ ಹೀಗೆ ಮಾಡುವುದರಿಂದ ಆಣಿ ಹಾಗೂ ನೋವು ದೂರವಾಗುತ್ತದೆ.