ಹೆಣ್ಣು ಮಕ್ಕಳಿಗೆ ತಾಯಿಗಿಂತ ಉತ್ತಮ ಗೆಳತಿಯರಿಲ್ಲ. ಹದಿಹರೆಯದ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಲೂ ಮುಜುಗರ ಪಡುವ ಸಂದರ್ಭದಲ್ಲಿ ಆಕೆಯ ಆದ್ಯತೆಯಲ್ಲಿ ಮೊದಲು ನೆನಪಾಗುವುದೇ ಅಮ್ಮ. ಹಾಗಾಗಿ ತಾಯಿಯಾದವಳು ಮಗಳಿಗೆ ಮುಟ್ಟಿನ ವಿಷಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಹಂಚಿಕೊಳ್ಳಬೇಕು.
ಆ ಸಮಯದಲ್ಲಿ ಹೆಣ್ಣು ಮಕ್ಕಳ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ತಿಳಿ ಹೇಳಬೇಕು. ಅದಕ್ಕೆ ಮುಜುಗರ ಪರಿಹಾರವಲ್ಲ ಎಂಬುದನ್ನೂ ವಿವರಿಸಬೇಕು. ಶುಚಿತ್ವ ಹೇಗೆ ಕಾಪಾಡಬೇಕು ಮತ್ತು ಎಷ್ಟು ಎಚ್ಚರ ವಹಿಸಬೇಕು ಎಂಬುದನ್ನೂ ತಿಳಿಹೇಳಬೇಕು.
ಮೊದಲು ಮುಟ್ಟಾದಾಗ ಮಕ್ಕಳು ಭಯದಿಂದ ಅಳುವುದು, ಸಿಟ್ಟಾಗುವುದು, ಅಸಹನೆ ತೋರಿಸುವುದು ಸಾಮಾನ್ಯ. ಈ ಸಂದರ್ಭದಲ್ಲಿ ತಾಯಿಯಾದವಳು ಸಾಂತ್ವನದ ಮಾತನ್ನಾಡಬೇಕು. ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳಿಗೆ ಆಗುವುದು ನಿನಗೂ ಆಗಿದೆ ಎಂಬುದನ್ನು ವಿವರಿಸಿ ಹೇಳಬೇಕು.
ಅಸಹ್ಯ ಪಡದೆ ಎದುರಿಸುವುದನ್ನು ಹೇಳಿಕೊಡಬೇಕು. ಮುಟ್ಟಿನ ಸಂದರ್ಭದಲ್ಲಿ ಹೇಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿಸಿ ಹೇಳಬೇಕು. ಸ್ಯಾನಿಟರ್ ಪ್ಯಾಡ್ ಬಗ್ಗೆ, ಸ್ನಾನದ ಮಹತ್ವದ ಬಗ್ಗೆ, ಒಳಅಂಗಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಬಗ್ಗೆ ನಿಧಾನಿಸಿ ವಿವರಿಸಿ ಹೇಳಬೇಕು.