ಬೆನ್ನು ನೋವು ಎಂಬುದು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಮಾನಸಿಕ ಖಿನ್ನತೆ, ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಒತ್ತಡ, ಮೂಳೆಗಳ ಸವೆತ, ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ ಕೆಲಸ ಮಾಡುವುದು. ಹೀಗೆ ಹಲವು ಕಾರಣಗಳಿಂದ ಬೆನ್ನು ನೋವು ನಮ್ಮನ್ನು ಬಾಧಿಸುತ್ತದೆ.
ಏನಿದಕ್ಕೆ ಪರಿಹಾರ..?
ಅತೀ ಹೆಚ್ಚಾಗಿ ಬೆನ್ನು ನೋವು ಕಾಣಿಸಿಕೊಂಡಾಗ ಬಿಸಿ ಬಿಸಿಯಾದ ಪದಾರ್ಥ ಸೇವಿಸುವುದು ಒಳಿತು. ಅದರಲ್ಲಿಯೂ ವಿಟಮಿನ್ ಡಿ ಕೊರತೆಯಿಂದ ಹಲವರಲ್ಲಿ ಬೆನ್ನು ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ವಿಟಮಿನ್ ಡಿ ಇರುವ ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ಸೇವಿಸುವುದು ಉತ್ತಮ.
ಅಲ್ಲದೇ ದಿನನಿತ್ಯದ ಬಳಕೆಯಲ್ಲಿ ವಿಟಮಿನ್ ಸಿ ಇರುವ ಆಹಾರಗಳಾದ ಲಿಂಬೆ ಹಾಗೂ ಬೆಳ್ಳುಳ್ಳಿ, ಆಲೂಗಡ್ಡೆ, ಟೊಮೋಟೊ ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಹಣ್ಣುಗಳ ಸಲಾಡ್ ಗಳನ್ನು ಹೆಚ್ಚಾಗಿ ಸೇವಿಸಿ. ಇದರ ಜತೆಗೆ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಿ. ಅಲ್ಲದೇ ಕೊಬ್ಬು ಇರುವ ಆಹಾರ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಎಣ್ಣೆಯುಕ್ತ ಪದಾರ್ಥಗಳು, ಮೊಸರು, ಸಿಹಿ ತಿಂಡಿಗಳು, ಸಕ್ಕರೆ, ಉಪ್ಪಿನಕಾಯಿ, ಟೀ-ಕಾಫಿ ಬಳಕೆಯನ್ನು ಕಡಿಮೆ ಮಾಡಿ.
ಪ್ರತಿ ದಿನ ಪ್ರಾಣಾಯಾಮ ಮಾಡುವುದರಿಂದ ಬೆನ್ನುನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದ್ದು, ಸೂಕ್ತ ಸಲಹೆ ಪಡೆದು ನಂತರ ಪ್ರಾಣಾಯಾಮವನ್ನು ಪ್ರತಿದಿನ ಜೀವನ ಶೈಲಿಯಲ್ಲಿ ರೂಢಿಸಿಕೊಳ್ಳಿ. ಅತಿಯಾದ ಮಾನಸಿಕ ಒತ್ತಡ ಕೂಡ ಬೆನ್ನುನೋವಿಗೆ ಪ್ರಮುಖ ಕಾರಣವಾಗಿದ್ದು ಆದಷ್ಟು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಅದಕ್ಕೆ ಪೂರಕವಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಒಂದೊಮ್ಮೆ ಬೆನ್ನು ನೋವು ಅತಿಯಾಗಿ ಕಂಡು ಬಂದಲ್ಲಿ ಬೆನ್ನು ಮೂಳೆಯ ಸಾಧ್ಯತೆಯೂ ಇದ್ದು ನುರಿತ ವೈದ್ಯರನ್ನು ಸಂದರ್ಶಿಸುವುದು ಒಳಿತು.