ಮಡಿಕೇರಿ : 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈವರೆಗೆ 324 ಮಿ.ಮಿ. ಮಳೆಯಾಗಿದ್ದು, ವಾಡಿಕೆಗಿಂತ ಶೇ.21 ರಷ್ಟು ಹೆಚ್ಚಾಗಿ ಮಳೆಯಾಗಿರುತ್ತದೆ.
ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಯಲ್ಲಿದ್ದು, ಜಿಲ್ಲೆಯಲ್ಲಿ ಭತ್ತದ ಸಸಿ ಮಡಿ ಕಾರ್ಯವು ಜೂನ್ ಮಾಹೆಯಲ್ಲಿ ನಡೆಯಲಿದ್ದು, ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ನಾಟಿ ಕಾರ್ಯಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯವನ್ನು ಜೂನ್ ಮಾಹೆಯಲ್ಲಿ ಕೈಗೊಳ್ಳಲಾಗುತ್ತದೆ.
ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 1871 ಕ್ವಿಂಟಾಲ್ ಭತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು 943.75 ಕ್ವಿಂಟಾಲ್ ಭತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದ್ದು, ಇಲ್ಲಿಯವರೆಗೆ 228 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಹಾಲಿ ರೈತ ಸಂಪರ್ಕ ಕೇಂದ್ರಗಳಲ್ಲಿ 715.75 ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನು ಇರುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.