ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿಪಾಡ್ವಾ ಎಂದು ಕರೆಯಲಾಗುತ್ತದೆ. ಯುಗಾದಿಯಂದು ಕರ್ನಾಟಕದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುತ್ತದೆ.
ಯುಗಾದಿಯ ದಿನ ತಳಿರು ತೋರಣಗಳಿಂದ ಮನೆಯನ್ನು ಅಲಂಕರಿಸಬೇಕು. ಮನೆ ಮುಂದೆ ಸುಂದರ ರಂಗೋಲಿ ಹಾಕುವುದು ಸಂಪ್ರದಾಯ. ಬೆಳಗ್ಗೆ ಅಭ್ಯಂಜನ ಸ್ನಾನ ಮಾಡಿ, ಮಾವಿನೆಲೆಯಿಂದ ಕಳಶದ ನೀರನ್ನು ಮನೆಯ ಎಲ್ಲೆಡೆ ಸಿಂಪಡಿಸಲಾಗುತ್ತದೆ.
ಮನೆಯಲ್ಲಿ ಎಲ್ಲರೂ ಅಂದು ಹೊಸಬಟ್ಟೆ ಧರಿಸುತ್ತಾರೆ. ಹಿರಿಯರು ಪಂಚಾಂಗ ಓದಿದ್ರೆ, ಉಳಿದವರೆಲ್ಲ ಕುಳಿತು ಆಲಿಸುತ್ತಾರೆ. ಈ ವರ್ಷ ಮಳೆ ಬೆಳೆ ಹೇಗಿದೆ? ಮದುವೆ ಮುಹೂರ್ತಗಳು ಯಾವುದು? ರಾಶಿಫಲ ಇವೆಲ್ಲದರ ಮಾಹಿತಿ ಪಂಚಾಂಗದಲ್ಲಿರುತ್ತದೆ.
ಯುಗಾದಿ ದಿನ ಎಲ್ಲರೂ ಬೇವು- ಬೆಲ್ಲ ತಿನ್ನುವ ಸಂಪ್ರದಾಯವಿದೆ. ಸುಖದ ಸಂಕೇತವಾದ ಬೆಲ್ಲ ಹಾಗೂ ಕಷ್ಟದ ಸಂಕೇತವಾದ ಬೇವನ್ನು ಸಮನಾಗಿ ಸ್ವೀಕರಿಸಬೇಕು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಯುಗಾದಿ ದಿನ ಹೂರಣದ ಹೋಳಿಗೆ ತಯಾರಿಸುತ್ತಾರೆ.