ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. 2024ರ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ ಎಂದು ಹೇಳಲಾಗ್ತಿದೆ. ಆ ದಿನ ಗರ್ಭಗುಡಿಯಲ್ಲಿ ರಾಮಲಲ್ಲಾನನ್ನು ಕೂರಿಸಲಾಗುವುದು.
ಅಯೋಧ್ಯೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೂಲಗಳ ಪ್ರಕಾರ ಪ್ರಧಾನಿ ಮೋದಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ.
ಪ್ರಾಣ ಪ್ರತಿಷ್ಠೆಗೆ ಒಂದು ವಾರ ಮುಂಚಿತವಾಗಿ ಪೂಜೆಗಳು ಆರಂಭವಾಗಲಿವೆ. ರಾಮಮಂದಿರದ ನೆಲ ಮಹಡಿ ಸಂಪೂರ್ಣವಾಗಿ ಸಿದ್ಧವಾಗಿದೆ, ಗರ್ಭಗುಡಿಯನ್ನು ಸಹ ಈಗಾಗಲೇ ನಿರ್ಮಿಸಲಾಗಿದೆ.
ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಹಲವು ಫೋಟೋಗಳು ಈಗಾಗ್ಲೇ ವೈರಲ್ ಆಗಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ರಾಮಲಲ್ಲಾನ ಸಿಂಹಾಸನಾರೋಹಣದ ಪ್ರಾಣ ಪ್ರತಿಷ್ಠಾ ಮಹೋತ್ಸವ ಇಡೀ ವಿಶ್ವದ ಆಕರ್ಷಣೆಯ ಕೇಂದ್ರವಾಗಲಿದೆ ಎಂಬುದು ಗಮನಾರ್ಹ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಉದ್ಘಾಟನೆಗೆ ಶ್ರೀರಾಮನ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ರಾಮಮಂದಿರವನ್ನು ನೋಡಲು ಅಸಂಖ್ಯಾತ ಭಕ್ತರು ಬರುವ ನಿರೀಕ್ಷೆ ಇದೆ. ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ದೇಶದ ಧಾರ್ಮಿಕ ಮುಖಂಡರಿಗೆ ಮತ್ತು ವಿಶ್ವದ 160 ದೇಶಗಳ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸಲಾಗುತ್ತದೆ.
ಅಯೋಧ್ಯೆಯ ಎಲ್ಲಾ ಪ್ರಮುಖ ಮಠಗಳ ಸಂತರನ್ನೂ ಆಮಂತ್ರಿಸಲಾಗುತ್ತದೆ. ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವ 10 ಸಾವಿರ ವಿಶೇಷ ಅತಿಥಿಗಳಿಗಿಂತ 25 ಸಾವಿರ ಸಂತರು ವಿಭಿನ್ನವಾಗಿರುತ್ತಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರಿಗೆ ಉಚಿತ ಭೋಜನದ ವ್ಯವಸ್ಥೆಯೂ ಇರಲಿದೆ. ಡಿಸೆಂಬರ್ ತಿಂಗಳೊಳಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಅಂತಿಮ ಸ್ಪರ್ಶ ನೀಡಲಾಗುವುದು. ಕರ್ನಾಟಕದ ಮೈಸೂರಿನಿಂದ ತರಿಸಿದ ಕಲ್ಲುಗಳಿಂದ ರಾಮಲಲ್ಲಾನ ಪ್ರತಿಮೆಯನ್ನು ತಯಾರಿಸಲಾಗುತ್ತಿದೆ. ರಾಜಸ್ಥಾನದ ಮಕ್ರಾನಾದ ಅಮೃತಶಿಲೆಯಿಂದಲೂ ಮತ್ತೊಂದು ಪ್ರತಿಮೆಯನ್ನು ಸಹ ತಯಾರಿಸಲಾಗುತ್ತಿದೆ.