ಕಫದಿಂದ ಬರುವ ಕೆಮ್ಮಿಗೆ ಔಷಧ ಕಂಡುಕೊಳ್ಳಬಹುದು. ಆದರೆ ಒಣಕೆಮ್ಮಿಗೆ ಔಷಧ ಹುಡುಕುವುದು ಬಹಳ ಕಷ್ಟ. ಒಮ್ಮೆ ನಿಮ್ಮನ್ನು ಒಣ ಕೆಮ್ಮಿನ ಸಮಸ್ಯೆ ಅಂಟಿಕೊಂಡರೆ ಅದು ನಿಮ್ಮನ್ನು ಬಿಟ್ಟು ದೂರವಾಗುವುದೇ ಇಲ್ಲ.
ಒಣ ಕೆಮ್ಮಿಗೆ ಮುಖ್ಯ ಕಾರಣ ಎಂದರೆ ಧೂಳಿನಿಂದ ಉಂಟಾಗುವ ಅಲರ್ಜಿ. ಅಸ್ತಮಾ ಸಮಸ್ಯೆ ಇರುವವರಿಗಂತೂ ಇದು ನಿಯಂತ್ರಣಕ್ಕೇ ಬರುವುದಿಲ್ಲ. ಇದರ ನಿವಾರಣೆಗೆ ಸಿರಪ್ ಗಳನ್ನು ಕುಡಿಯುವ ಬದಲು ಜೇನುತುಪ್ಪ ಬಳಸಿ ನೋಡಿ. ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಬಾಯಲ್ಲಿ ಹಾಕಿಕೊಳ್ಳುವುದರಿಂದ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.
ಒಂದು ಲೋಟ ಬೆಚ್ಚಗಿನ ನೀರಿಗೆ ಚಿಟಿಕೆ ಅರಶಿನ ಪುಡಿ ಬೆರೆಸಿ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಬೆಚ್ಚನೆಯ ಹಾಲಿಗೆ ಚಿಟಿಕೆ ಅರಶಿನ ಉದುರಿಸಿ ಮಕ್ಕಳಿಗೆ ಕೊಡುವುದರಿಂದ ಕೆಮ್ಮುದಮ್ಮಿನ ಸಮಸ್ಯೆ ದೂರವಾಗುತ್ತದೆ.
ಶುಂಠಿ ಚಹಾವನ್ನು ಕುಡಿಯುವ ಮೂಲಕ, ಶುಂಠಿ ಕಷಾಯ ಸೇವಿಸುವ ಮೂಲಕವೂ ನಿಮ್ಮ ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಮಸಾಲೆ ಚಹಾ, ಪುದೀನಾ ಎಲೆಗಳು, ನೀಲಗಿರಿ ಎಣ್ಣೆಗಳನ್ನು ಕ್ರಮಪ್ರಕಾರವಾಗಿ ಬಳಸುವ ಮೂಲಕವೂ ಕೆಮ್ಮಿನ ಸಮಸ್ಯೆ ದೂರ ಮಾಡಬಹುದು.