
ಬಾಲಿವುಡ್ ಡ್ಯಾನ್ಸಿಂಗ್ ದೀವಾ ಮಾಧುರಿ ದೀಕ್ಷಿತ್ ಅಂದರೆ ಮೊದಲು ನೆನಪಾಗೋದೇ ಅವರ ಅಪ್ರತಿಮ ನೃತ್ಯ ಶೈಲಿ. ತಮ್ಮ ಅತ್ಯದ್ಭುತ ನೃತ್ಯದ ಮೂಲಕವೇ ಮಾಧುರಿ ದೀಕ್ಷಿತ ಬಾಲಿವುಡ್ ಸಿನಿ ಲೋಕದಲ್ಲಿ ಅಚ್ಚಳಿಯದ ಹೆಜ್ಜೆಯನ್ನ ಮೂಡಿಸಿದ್ದಾರೆ. ದಿಲ್, ಸಾಜನ್, ಖಳನಾಯಕ್, ಬೇಟಾ, ಪುಕಾರ್ ಸೇರಿದಂತೆ ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ಮಾಧುರಿ ಅಭಿನಯಿಸಿದ್ದಾರೆ.
1994ರಲ್ಲಿ ತೆರೆಕಂಡ ಅಂಜಾಮ್ ಸಿನಿಮಾದ ಅಠಾರಹ್ ಸಾಲ್ ಕುನ್ವಾರಿ ಕಲಿ ಎಂಬ ಹಾಡು ಮಾಧುರಿ ದೀಕ್ಷಿತ್ರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿತು. ಇದೀಗ ನಟಿ ಮೇ 15 ಕ್ಕೆ 54 ನೇ ವಸಂತಕ್ಕೆ ಕಾಲಿಟ್ಟಿದ್ರೂ ಸಹ ಈ ಹಾಡು ಇನ್ನೂ ಚಿರಪರಿಚಿತವಾಗಿದೆ. ಇದರ ಜೊತೆಯಲ್ಲಿ ʼಏಕ್ ದೋ ತೀನ್ʼ ಹಾಡು ಸಹ ಮಾಧುರಿ ದೀಕ್ಷಿತ್ರ ಫೇಮಸ್ ಸಾಂಗ್ಗಳಲ್ಲಿ ಒಂದಾಗಿದೆ.
ಮಾಧುರಿ ದೀಕ್ಷಿತ್ ಡ್ಯಾನ್ಸಿಂಗ್ ದೀವಾ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಇವರು ಕೇವಲ 9 ವರ್ಷ ವಯಸ್ಸಿನವರಾಗಿದ್ದಲೇ ಕಥಕ್ ನರ್ತಕಿಯಾಗಿ ವಿದ್ಯಾರ್ಥಿವೇತನವನ್ನ ಪಡೆದಿದ್ದರು.
ಗುರು ಪೂರ್ಣಿಮಾದಂದು ನೃತ್ಯ ಮಾಡಿದ್ದ ಹಿನ್ನೆಲೆ ಮಾಧುರಿ ದೀಕ್ಷಿತ್ ಕೇವಲ 7-8 ವರ್ಷ ಪ್ರಾಯದವರಾಗಿದ್ದಲೇ ದಿನಪತ್ರಿಕೆಯಲ್ಲಿ ಅವರ ಬಗ್ಗೆ ಮೊದಲ ಬಾರಿಗೆ ಸುದ್ದಿ ಪ್ರಕಟವಾಗಿತ್ತು.
ಕಲಾವಿದ ಎಂ.ಎಫ್. ಹುಸೇನ್ ಮಾಧುರಿ ದೀಕ್ಷಿತ್ ಅಭಿನಯಕ್ಕೆ ಎಷ್ಟರ ಮಟ್ಟಿಗೆ ಮಾರು ಹೋಗಿದ್ದರು ಅಂದರೆ ʼಹಮ್ ಆಪ್ ಕೆ ಹೈ ಕೌನ್ʼ ಸಿನಿಮಾವನ್ನ ಬರೋಬ್ಬರಿ 67 ಬಾರಿ ವೀಕ್ಷಿಸಿದ್ದರು. ಅಲ್ಲದೇ ಆಜಾ ನಚಲೆ ಸಿನಿಮಾ ತೆರೆ ಕಂಡ ವೇಳೆ ಸಂಪೂರ್ಣ ಥಿಯೇಟರ್ನ್ನ ಒಬ್ಬರೇ ಬುಕ್ ಮಾಡಿದ್ದರು.
ಹುಸೇನ್ ಪಾಲಿಗೆ ಮಾಧುರಿ ದೀಕ್ಷಿತ್ ಬಹಳ ವಿಶೇಷ ವ್ಯಕ್ತಿ ಆಗಿದ್ದರು. 2000ದಲ್ಲಿ ಮೊದಲ ಸಿನಿಮಾ ಗಜ ಗಾಮಿನಿಯನ್ನ ನಿರ್ದೇಶಿಸಿದ್ದ ಹುಸೇನ್ ಈ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ಗೆ ಐದು ಪಾತ್ರಗಳನ್ನ ನೀಡಿದ್ದರು.
ಆಗ ನಾಯಕ ನಟನಿಗೆ ಹೆಚ್ಚು ಸಂಭಾವನೆ ದೊರೆಯುತ್ತಿದ್ದ ಕಾಲ. ಆದರೆ ಮಾಧುರಿ ದೀಕ್ಷಿತ್ರ ಜನಪ್ರಿಯತೆ ಎಷ್ಟಿತ್ತು ಅಂದರೆ ಈ ಮಾತು ಅವರ ಜೀವನದಲ್ಲಿ ಸುಳ್ಳಾಯಿತು. ಮಾಧುರಿ ತಮ್ಮ ಸಿನಿಮಾದಲ್ಲಿ ನಾಯಕ ನಟನಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದರು. ಹಮ್ ಆಪ್ ಕೆ ಹೈ ಕೌನ್ ಸಿನಿಮಾದಲ್ಲಿ ಮಾಧುರಿ ಸಲ್ಮಾನ್ ಖಾನ್ಗಿಂತ ಹೆಚ್ಚು ಮೊತ್ತದ ಸಂಭಾವನೆಯನ್ನ ಪಡೆದಿದ್ದರು.
ಮಾಧುರಿ ದೀಕ್ಷಿತ್ ಮಹಾರಾಷ್ಟ್ರದ ಕೊಕನಸ್ತಾ ಬ್ರಾಹ್ಮಣ ಕುಟುಂಬದಲ್ಲಿ ಶಂಕರ್ ಹಾಗೂ ಸ್ನೇಹಲತಾ ದೀಕ್ಷಿತ್ ದಂಪತಿಯ ಪುತ್ರಿಯಾಗಿ ಜನಿಸಿದ್ರು. ಡಿವೈನ್ ಚೈಲ್ಡ್ ಹೈಸ್ಕೂಲ್ನಲ್ಲಿ ಮಾಧುರಿ ಶಿಕ್ಷಣವನ್ನ ಪಡೆದ್ರು.
1984ರಲ್ಲಿ ರಾಜಶ್ರೀ ಪ್ರೊಡಕ್ಷನ್ನಲ್ಲಿ ಮಾಧುರಿ ತಮ್ಮ ಸಿನಿ ಜರ್ನಿಯನ್ನ ಆರಂಭಿಸಿದರು. ಪ್ರಖ್ಯಾತ ನಟ ಹಾಗೂ ರಾಜಕಾರಣಿ ದಿವಂಗತ ತಾಪಸ್ ಪೌಲ್ಗೆ ಸಹನಟಿಯಾಗಿ ಮಾಧುರಿ ನಟಿಸಿದ್ದರು.
