ಕಲಬುರಗಿ : ಪ್ರಸಕ್ತ 2023 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ ಮೂರು ದಿನದಲ್ಲಿ ಅಂದರೆ (ಜುಲೈ 26 ರಿಂದ 28 ವರೆಗೆ) ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಬೆಳೆ ಹಾನಿಯಾಗಿರುವ ಸಾಧ್ಯತೆ ಇರುವ ಕಾರಣ ಬೆಳೆ ವಿಮೆ ಮಾಡಿಸಿದ ರೈತರು ದೂರು ದಾಖಲಿಸಲು ಯೂನಿವರ್ಸಲ್ ಸೊಂಪೂ ಜನರಲ್ ಇನ್ಶುರೆನ್ಸ್ ಕಂಪನಿಯ ಟೋಲ್ ಫ್ರೀ ಸಂ.1800-200-5142 ಗೆ ಸಂಪರ್ಕಿಸಿದಾಗ ತಾಂತ್ರಿಕ ತೊಂದರೆ ಕಂಡು ಬರುತ್ತಿರುವದರಿಂದ ರೈತರು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಇದೇ ಜುಲೈ 31 ರೊಳಗೆ ಲಿಖಿತ ದೂರು ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಜುಲೈ 29 ಮತ್ತು 30 ರಂದು ಸಾರ್ವತ್ರಿಕ ರಜೆ ಇದ್ದರೂ ಸಹ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ತೆರೆದಿರಲಿದ್ದು, ರೈತರಿಂದ ದೂರು ಸ್ವೀಕರಿಸುವಂತೆ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ. ಹೀಗಾಗಿ ಬೆಳೆ ಹಾನಿಯಾದ ಜಮೀನಿನ ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವಿಮೆ ಪಾವತಿ ದಾಖಲೆಯೊಂದಿಗೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಹೋಗಿ ಲಿಖಿತ ದೂರು ಸಲ್ಲಿಸಬಹುದಾಗಿದೆ.
ತಡವಾಗಿ ಬಂದ ಅರ್ಜಿ ನಿರಾಕರಿಸುವ ಸಾಧ್ಯತೆ ಇರುವ ಕಾರಣ ಬೆಳೆ ಹಾನಿಯಾದ ರೈತರು ಕೂಡಲೇ ಲಿಖಿತ ದೂರು ನೀಡುವಂತೆ ರೈತ ಬಾಂಧವರಲ್ಲಿ ಸಮದ್ ಪಟೇಲ್ ಅವರು ಕೋರಿದ್ದಾರೆ.