ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ನಗದು ಪಾವತಿ ಮೊತ್ತವನ್ನು 20 ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸುವಂತಿಲ್ಲ ಎಂದು ಸೂಚಿಸಿದೆ.
ಹೀಗಾಗಿ ಚಿನ್ನದ ಮೇಲೆ ಸಾಲ ಪಡೆಯುವವರು 20 ಸಾವಿರ ಮಾತ್ರ ನಗದು ಪಡೆಯಬಹುದಾಗಿದ್ದು, ಇನ್ನುಳಿದ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಬೇಕಾಗುತ್ತದೆ. ಇದು ತುರ್ತು ಸಂದರ್ಭದಲ್ಲಿ ಚಿನ್ನದ ಸಾಲ ಪಡೆಯುವವರಿಗೆ ಅನಾನುಕೂಲಕರವಾಗಿ ಪರಿಗಣಿಸಲಿದೆ ಎಂದು ಹೇಳಲಾಗಿದೆ.
ಐಐಎಫ್ಎಲ್ ಫೈನಾನ್ಸ್ ಕಂಪನಿ, ಸಕಾಲಕ್ಕೆ ಸಾಲ ಮರುಪಾವತಿಸದ ಗ್ರಾಹಕರ ಚಿನ್ನವನ್ನು ಹರಾಜಿಗಿಟ್ಟಿದ್ದ ವೇಳೆ ದಾಖಲೆಗಳ ಪರಿಶೀಲನೆ ನಡೆಸಿದಾಗ ವ್ಯವಹಾರದಲ್ಲಿ ಹಲವು ದೋಷಗಳಿರುವುದನ್ನು ಆರ್ಬಿಐ ಪತ್ತೆ ಹಚ್ಚಿತ್ತು. ಇದಾದ ಒಂದು ವಾರದ ಬಳಿಕ ಇದೀಗ ನಗದು ಪಾವತಿಯನ್ನು 20 ಸಾವಿರಕ್ಕೆ ಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ.