ಬರ ಪರಿಹಾರದ ನಿರೀಕ್ಷೆಯಲ್ಲಿರುವ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ರೈತ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ಮೂರು ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನು ಅರ್ಹತೆಯ ಆಧಾರದಲ್ಲಿ ಪರಿಹಾರ ಪಾವತಿಸಲಾಗುತ್ತಿದ್ದು ಈವರೆಗೆ 32.12 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಪರಿಹಾರ ಮೊತ್ತ ಜಮೆ ಮಾಡಲಾಗಿದೆ. ಅಲ್ಲದೆ ಇನ್ನೂ ಎರಡು ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.
ಬರ ಪರಿಹಾರದ ಪಟ್ಟಿಯಲ್ಲಿ ಸೇರ್ಪಡೆಯಾಗದ ತಾಲೂಕುಗಳಲ್ಲಿಯೂ ಸಹ ಮಳೆ ಆಧಾರಿತ ಬೆಳೆಗಳಿಗೆ ಪರಿಹಾರ ಧನ ನೀಡಲು ಹಾಗೂ ಎರಡು ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.