ಮಡಿಕೇರಿ : ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯದಿಂದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು (ಸ್ಕೀಮ್ ಪಾರ್ ಫಾರ್ಮಲೈಜೇಷನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್) (ಪಿಎಂಎಫ್ಎಂಇ) 2020-21 ರಿಂದ ಚಾಲ್ತಿಯಲ್ಲಿರುತ್ತದೆ.
ಈ ಯೋಜನೆಯಡಿ ಅಸಂಘಟಿತ ವಲಯದಲ್ಲಿರುವ ಸೂಕ್ಷ/ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಪರ್ಧಾತ್ಮಕತೆ ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಹಕಾರಿ ಸಂಘಗಳಿಗೆ ಅವುಗಳ ಮೌಲ್ಯ ಸರಪಳಿಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
18 ವರ್ಷ ಮೇಲ್ಪಟ್ಟ ಆಸಕ್ತ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ವಿದ್ಯಾರ್ಹತೆಯ ಮಿತಿ ಇರುವುದಿಲ್ಲ. ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಸಹಾಯಧನ ಜೊತೆಗೆ ಹೆಚ್ಚುವರಿ ಶೇ.15 ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ಒದಗಿಸಲಾಗುವುದು (ಗರಿಷ್ಠ ಮಿತಿ 15 ಲಕ್ಷಗಳು), ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ದಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮತ್ತಿತರ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ. ಇದರ ಲಾಭವನ್ನು ಹಲವು ಆಸಕ್ತ ಉದ್ಯಮಿಗಳು ಪಡೆದುಕೊಂಡಿದ್ದು, ಸ್ವಂತವಾಗಿ ಆಹಾರ ಸಂಸ್ಕರಣೆ ಉದ್ಯಮ ಪ್ರಾರಂಭಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಹೊಸದಾಗಿ ಉದ್ಯಮವನ್ನು ಶುರುಮಾಡಿ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಸ್ವಂತ ಉದ್ದಿಮೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಾಫಿ, ಸಾಂಬಾರು ಪದಾರ್ಥ, ಶುಂಠಿ, ಕೋಕೋ, ವಿರಳ ಹಣ್ಣಿನ ತಳಿಗಳು, ಮುಸುಕಿನ ಜೋಳದ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಈ ಬೆಳೆಗಳ ಉತ್ಪನ್ನಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿರುತ್ತದೆ.
ಆಸಕ್ತ ಫಲಾನುಭವಿಗಳು http://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ನೋಂದಾಯಿಸಬಹುದಾಗಿದೆ. ಫಲಾನುಭವಿಗಳ ದಾಖಲೆ ಕ್ರೋಢೀಕರಣ, ವಿಸ್ತತ ಯೋಜನಾ ವರದಿ ತಯಾರಿಕೆ ಹಾಗೂ ಇತರೆ ಮಾರ್ಗದರ್ಶನಕ್ಕಾಗಿ ಈ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ನೀರಜಾ ಕೆ.ಜಿ. ದೂರವಾಣಿ ಸಂಖ್ಯೆ 8861422540 ನ್ನು ನೇರವಾಗಿ ಸಂಪರ್ಕಿಸುವುದು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರು(ವಿ.ತ), ಪಿ.ಎಂ.ಎಪ್.ಎಂ.ಇ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಡಿಕೇರಿ ಅವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ತಿಳಿಸಿದ್ದಾರೆ.