ದಿನೇ ದಿನೇ ದೇಶದಲ್ಲಿ ಬಿಸಿಲ ತಾಪ ಏರುತ್ತಲೇ ಇದೆ. ಈ ಸಮಯದಲ್ಲಿ ನಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಅಗತ್ಯ. ಬೇಸಿಗೆಯಲ್ಲಿ ಬೆವರಿನಿಂದಾಗಿ ಚರ್ಮಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತದೆ. ಮುಖದಲ್ಲಂತೂ ಕಪ್ಪನೆಯ ಕಲೆಗಳು ಮೂಡುತ್ತವೆ. ಮೊಡವೆಗಳು ಹೆಚ್ಚಾಗುತ್ತವೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳು ಕೂಡ ಇವುಗಳನ್ನು ಹೋಗಲಾಡಿಸುವಷ್ಟು ಪರಿಣಾಮಕಾರಿಯಾಗಿಲ್ಲ. ಹಾಗಾಗಿ ನೀವು ಕೆಲವೊಂದು ಸರಳ ಉಪಾಯಗಳನ್ನು ಮನೆಯಲ್ಲೇ ಮಾಡಬೇಕು.
ಮುಖಕ್ಕೆ ಐಸ್ ಕ್ಯೂಬ್ ನಿಂದ ಸ್ಕ್ರಬ್ ಮಾಡಿಕೊಳ್ಳುವುದು ತುಂಬಾನೇ ಒಳ್ಳೆಯದು. ಆಲೂಗಡ್ಡೆ ರಸದಿಂದ ಐಸ್ ಕ್ಯೂಬ್ ಗಳನ್ನು ತಯಾರಿಸಿ ಅವುಗಳಿಂದ ಮಸಾಜ್ ಮಾಡಿಕೊಳ್ಳಿ. ಆದ್ರೆ ನಿಮ್ಮದು ಎಣ್ಣೆಯುಕ್ತ ಚರ್ಮವಾಗಿದ್ದರೆ ಆಲೂಗಡ್ಡೆ ಐಸ್ ಕ್ಯೂಬ್ ಬೇಡ. ತುಳಸಿ ಹಾಗೂ ಪುದೀನಾ ಸೊಪ್ಪಿನ ರಸ ತೆಗೆದು ಅದನ್ನು ಐಸ್ ಕ್ಯೂಬ್ ಮಾಡಿ ಅದರಿಂದ ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ. ಇದನ್ನು ತಯಾರಿಸುವುದು ಬಹಳ ಸುಲಭ.
ಒಂದು ಕಪ್ ನೀರು ತೆಗೆದುಕೊಂಡು ಅದರಲ್ಲಿ 6-7 ತುಳಸಿ ಮತ್ತು 6-7 ಪುದೀನಾ ಎಲೆಗಳನ್ನು ನೆನೆಸಿಡಿ. ಸ್ವಲ್ಪ ಸಮಯದ ನಂತರ ಅದನ್ನು ಚೆನ್ನಾಗಿ ತೊಳೆದು ಪೇಸ್ಟ್ ತಯಾರಿಸಿ. ಅದನ್ನು 1 ಕಪ್ ನೀರಿಗೆ ಹಾಕಿ ಕುದಿಸಿ. ನಂತರ ಹಾಗೇ ತಣ್ಣಗಾಗಲು ಬಿಡಿ. ಅದಕ್ಕೆ ರೋಸ್ ವಾಟರ್ ಸೇರಿಸಿ, ಐಸ್ ಟ್ರೇನಲ್ಲಿ ಇಟ್ಟು ಫ್ರೀಝ್ ಮಾಡಿ. ಈ ಐಸ್ ಕ್ಯೂಬ್ ಅನ್ನು ತೆಗೆದುಕೊಂಡು ವೃತ್ತಾಕಾರವಾಗಿ ನಿಮ್ಮ ಮುಖದ ಮೇಲೆ ಉಜ್ಜಿಕೊಳ್ಳಿ.
ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಮತ್ತು ಐಸ್ ಕ್ಯೂಬ್‌ಗಳನ್ನು ನೇರವಾಗಿ ಮುಖದ ಮೇಲೆ ಅನ್ವಯಿಸಲು ಸಾಧ್ಯವಾಗದಿದ್ದರೆ, ನೀವು ಅದನ್ನು ಹತ್ತಿಯ ಕರವಸ್ತ್ರದಲ್ಲಿಟ್ಟು ಮಸಾಜ್ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ಚರ್ಮ ಒಣಗಿ ಶುಷ್ಕವಾಗುವುದಿಲ್ಲ. ಬಿಸಿಲಿನಿಂದಾಗುವ ಕಪ್ಪನೆಯ ಕಲೆಗಳು, ಮೊಡವೆಗಳು ಮಾಯವಾಗುತ್ತವೆ.