ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಊಟದಲ್ಲಿ ಕೊಂಚ ಏರುಪೇರಾದ್ರೂ ಹೊಟ್ಟೆ ನೋವು ಮತ್ತು ತಲೆತಿರುಗುವಿಕೆ ಕೂಡ ಪ್ರಾರಂಭವಾಗುತ್ತದೆ.
ಹುಳಿ ತೇಗು ಬರಲಾರಂಭಿಸಿದ್ರೆ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳು ಸಹ ಕಷ್ಟಕರವಾಗುತ್ತವೆ. ಇಂತಹ ಹುಳಿತೇಗು ಮತ್ತು ಆಸಿಡಿಟಿಯನ್ನು ಹೋಗಲಾಡಿಸುವ ವಸ್ತುಗಳು ಯಾವುವು ಎಂದು ತಿಳಿಯೋಣ. ಸಾಮಾನ್ಯವಾಗಿ ಹೊಟ್ಟೆ ನೋವು ಬಂದಾಗ ನಾವು ತಂಪಿನ ಪದಾರ್ಥಗಳನ್ನು ತಿನ್ನುತ್ತೇವೆ. ಇವುಗಳಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಸಹ ದೂರವಾಗುತ್ತವೆ.
ಮೊಸರು: ಮೊಸರು ಹೊಟ್ಟೆಯನ್ನು ತಣ್ಣಗಿಡುತ್ತದೆ. ಅದಕ್ಕಾಗಿಯೇ ಇದನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪ್ರತಿದಿನ ಊಟದ ನಂತರ ಮೊಸರು ಸೇವನೆ ಮಾಡಬೇಕು. ಇದರಿಂದ ಉದರ ಬಾಧೆ ದೂರವಾಗುತ್ತದೆ, ಜೊತೆಗೆ ಹುಳಿತೇಗಿನ ಸಮಸ್ಯೆಯೂ ಉಂಟಾಗುವುದಿಲ್ಲ.
ಏಲಕ್ಕಿ: ಆಹಾರದ ಸುವಾಸನೆ ಹೆಚ್ಚಿಸಲು ಚಿಕ್ಕ ಏಲಕ್ಕಿಯನ್ನು ಹೆಚ್ಚಾಗಿ ಬಳಸುತ್ತೇವೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್. ಒಂದು ಅಥವಾ ಎರಡು ಏಲಕ್ಕಿಯನ್ನು ಜಗಿದು ನೀರು ಕುಡಿದರೆ ಹುಳಿ ತೇಗಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಪುದೀನಾ: ಬೇಸಿಗೆ ಕಾಲದಲ್ಲಿ ಪುದೀನಾ ಸೊಪ್ಪಿನ ಬಳಕೆ ಹೆಚ್ಚು ಮಾಡಬೇಕು. ಪುದೀನಾ ಸೊಪ್ಪು ಹೊಟ್ಟೆಗೆ ತಂಪು ಮತ್ತು ತಾಜಾತನವನ್ನು ನೀಡುತ್ತದೆ. ಪುದೀನಾ ಸೇವನೆಯಿಂದ ಜೀರ್ಣಕ್ರಿಯೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಪುದೀನಾ ಸೇವನೆ ಮಾಡುವುದರಿಂದ ಹುಳಿ ತೇಗು ಕೂಡ ಬರುವುದಿಲ್ಲ.
ಶುಂಠಿ: ಆಹಾರದ ರುಚಿಯನ್ನು ಹೆಚ್ಚಿಸಲು ಶುಂಠಿಯನ್ನು ಮಸಾಲೆಯಾಗಿ ಬಳಸಲಾಗುತ್ತದೆ. ನೀವು ಚೂರು ಹಸಿ ಶುಂಠಿಯನ್ನು ಸ್ವಲ್ಪ ಉಪ್ಪಿನೊಂದಿಗೆ ಅಗಿದು ತಿಂದರೆ ಹೊಟ್ಟೆಯಲ್ಲಿರುವ ಆಸಿಡ್ ಅನ್ನು ತೊಡೆದುಹಾಕಬಹುದು.