ದೇಹದಲ್ಲಿ ಬೆವರು ಬರುವುದು ಸಾಮಾನ್ಯ ಸಂಗತಿ. ಉಷ್ಣಾಂಶವನ್ನು ಕಡಿಮೆ ಮಾಡಿ ದೇಹವನ್ನು ತಣ್ಣಗಾಗಿಸುವ ಪ್ರಕ್ರಿಯೆ ಇದು. ಆದ್ರೆ ಅತಿಯಾಗಿ ಬೆವರುವುದು ಸಾಮಾನ್ಯ ಲಕ್ಷಣವಲ್ಲ. ಇದಕ್ಕೆ ಕಾರಣ ಮತ್ತು ಪರಿಹಾರವನ್ನು ಖುದ್ದು ವೈದ್ಯರೇ ತಿಳಿಸಿಕೊಟ್ಟಿದ್ದಾರೆ.
ದೇಹವು ಸ್ವತಃ ತಣ್ಣಗಾಗಲು ತಾಪಮಾನ ನಿಯಂತ್ರಣದ ಒಂದು ರೂಪವಾಗಿ ಬೆವರನ್ನು ಬಳಸುತ್ತದೆ. ಅತಿಯಾದ ಬೆವರುವಿಕೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬೆವರುವಿಕೆಯನ್ನು ವೈದ್ಯಕೀಯವಾಗಿ ಹೈಪರ್ಹೈಡ್ರೋಸಿಸ್ ಎಂದು ಕರೆಯಲಾಗುತ್ತದೆ.
ಬಿಸಿಲಲ್ಲಿ ನಡೆದಾಗ, ವ್ಯಾಯಾಮ ಮಾಡಿದಾಗ, ಬಿಸಿಯಾದ ಪಾನೀಯ ಸೇವಿಸಿದಾಗ ಬೆವರುವುದು ಸಹಜ. ಆದ್ರೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅತಿಯಾಗಿ ಬೆವರು ಬರುತ್ತಿದ್ದರೆ ಅದು ನೀವು ತೆಗೆದುಕೊಳ್ಳುತ್ತಿರುವ ಔಷಧಿಯ ಅಡ್ಡ ಪರಿಣಾಮವಾಗಿರಬಹುದು. ಶೇ 1-2ರಷ್ಟು ಜನರಲ್ಲಿ ಇದು ಕಂಡು ಬರುತ್ತದೆ.
ಕೆಲವರಿಗೆ ಮುಖ ಮತ್ತು ತಲೆ ಅತಿಯಾಗಿ ಬೆವರುವುದುಂಟು. ಇದಕ್ಕೆ ಕ್ರಾನಿಯೋಫೇಶಿಯಲ್ ಹೈಪರ್ಹೈಡ್ರೋಸಿಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಆನುವಂಶಿಕ ಕಾರಣಗಳೂ ಇರುತ್ತವೆ. ಬೆವರು ಗ್ರಂಥಿಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ, ಹವಾಮಾನ ಪರಿಸ್ಥಿತಿ, ವಿಪರೀತದ ಭಾವನೆಗಳು, ಕೆಲವು ಔಷಧಿಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳು ಸಹ ಮುಖ ಮತ್ತು ತಲೆಯ ಮೇಲೆ ಅತಿಯಾದ ಬೆವರುವಿಕೆಯನ್ನು ಉಂಟುಮಾಡಬಹುದು.
ಅತಿಯಾದ ಬೆವರುವಿಕೆಯಿಂದ ಅಂತಹ ಸಮಸ್ಯೆಗಳೇನಿಲ್ಲ. ಆದ್ರೆ ಇದು ಒಂದು ಬಗೆಯ ಅನಾನುಕೂಲತೆ ಸೃಷ್ಟಿಸುತ್ತದೆ. ಹಾಗಾಗಿ ಬೆವರು ಗ್ರಂಥಿಗಳಿಗೆ ನರಗಳಿಂದ ಉಂಟಾಗುವ ಅತಿಯಾದ ಪ್ರಚೋದನೆಯನ್ನು ಕಡಿಮೆ ಮಾಡಲು ಬೊಟೊಕ್ಸ್ ಮಾಡಿಸಿಕೊಳ್ಳಬಹುದು. 8 ತಿಂಗಳುಗಳ ಕಾಲ ಇದು ಪರಿಣಾಮ ಬೀರುತ್ತದೆ. ವೈದ್ಯರನ್ನು ಸಂಪರ್ಕಿಸಿದರೆ ಅವರು ಆಂಟಿಕೋಲಿನರ್ಜಿಕ್ಸ್ ಎಂಬ ಔಷಧವನ್ನು ನೀಡುತ್ತಾರೆ.
ಇದಲ್ಲದೆ ಅತಿಯಾದ ಬೆವರುವಿಕೆಗೆ ಕಾರಣವಾಗುವ ಖಿನ್ನತೆ ಅಥವಾ ಆತಂಕಕ್ಕೆ ಸೂಕ್ತ ಚಿಕಿತ್ಸೆ ಪಡೆಯಬಹುದು. ಬೆವರಿನ ಅತಿಯಾದ ಉತ್ಪಾದನೆಯನ್ನು ನಿಲ್ಲಿಸಲು ನರಗಳ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗುತ್ತದೆ. ಅತಿಯಾದ ಬೆವರುವಿಕೆಯನ್ನು ತಡೆಯಲು ಸರಳ ವಿಧಾನಗಳೆಂದರೆ ಪ್ರತಿದಿನ ತಪ್ಪದೇ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಿ.
ಆರಾಮದಾಯಕವಾದ ಹತ್ತಿಯ ಬಟ್ಟೆಗಳನ್ನು ಧರಿಸಿ. ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಮಸಾಲೆಯುಕ್ತ ಆಹಾರವನ್ನು ತ್ಯಜಿಸಿ. ಬೆವರು ಒರೆಸಲು ಯಾವಾಗಲೂ ಮೃದುವಾದ ಮತ್ತು ಒಣಗಿದ ಟವೆಲ್ ಇಟ್ಟುಕೊಳ್ಳಿ.