
ಕಚೇರಿ ಕೆಲಸ, ಮನೆಯ ಜವಾಬ್ದಾರಿಗಳು ಹೀಗೆ ಯಾವಾಗಲೂ ಗಡಿಬಿಡಿಯ ಬದುಕು. ಈ ವೇಗದ ಜೀವನ ಶೈಲಿಯಲ್ಲಿ ನಮ್ಮನ್ನು ನಾವು ಮರೆತಂತೆ ತೋರುತ್ತದೆ. ಇದಕ್ಕೆ ಮೊದಲ ಬಲಿಪಶು ನಮ್ಮ ದೇಹ. ಕೆಲವೊಮ್ಮೆ ಬೆನ್ನು ನೋವು, ಭುಜಗಳಲ್ಲಿ ಬಿಗಿತ, ಮೊಣಕಾಲುಗಳಲ್ಲಿ ನೋವು ಹೀಗೆ ದೇಹದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆ ಕಾಡುತ್ತಲೇ ಇರುತ್ತದೆ.
ಆಯುರ್ವೇದದ ಪ್ರಕಾರ ಇದಕ್ಕೆಲ್ಲಾ ಕಾರಣ ನಮ್ಮ ದೇಹದಲ್ಲಿನ ‘ವಾತ ದೋಷ’ದ ಅಸಮತೋಲನ. ವಾತದ ಅಸಮತೋಲನವನ್ನು ತೆಗೆದುಹಾಕಲು 3 ಸುಲಭ ಮಾರ್ಗಗಳನ್ನು ಅನುಸರಿಸಬೇಕು. ಇದರಿಂದ ನೋವು ಕಡಿಮೆಯಾಗಿ ದೇಹದಲ್ಲಿ ಶಕ್ತಿ ತುಂಬುತ್ತದೆ.
ಹಸಿ ಆಹಾರ ಮತ್ತು ಒಣ ಆಹಾರ ಸೇವನೆ ಕಡಿಮೆ ಮಾಡಬೇಕು – ಹಸಿ ಆಹಾರಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತವೆ. ಇವುಗಳನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚು ಶ್ರಮಪಡಬೇಕಾಗುತ್ತದೆ. ಹೆಚ್ಚುವರಿಯಾಗಿ ಅವು ದೇಹದಲ್ಲಿ ಶುಷ್ಕತೆಯನ್ನು ಹೆಚ್ಚಿಸುತ್ತವೆ. ಇದು ನೋವಿನ ಸಂವೇದನೆಯನ್ನು ಸಹ ಹೆಚ್ಚಿಸುತ್ತದೆ. ಹಸಿ ಆಹಾರದ ಬದಲಿಗೆ, ಬಿಸಿ-ಬಿಸಿಯಾಗಿ ಚೆನ್ನಾಗಿ ಬೇಯಿಸಿದ ಆಹಾರವನ್ನು ತೆಗೆದುಕೊಳ್ಳಿ. ಇದು ಸೌಮ್ಯವಾದ ಮಸಾಲೆಗಳು, ಲಘು ಉಪ್ಪು ಮತ್ತು ಸಾಕಷ್ಟು ಪ್ರಮಾಣದ ತೇವಾಂಶವನ್ನು ಹೊಂದಿರುತ್ತದೆ. ಒಂದು ಬೌಲ್ ಬಿಸಿ ಗಂಜಿ ಕೂಡ ನಮ್ಮ ಹೊಟ್ಟೆಗೆ ಬೆಚ್ಚಗಿನ ಅಪ್ಪುಗೆಯಂತಿರುತ್ತದೆ ಮತ್ತು ದೇಹದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹುಳಿ ಆಹಾರಗಳ ಸೇವನೆ ಬೇಡ – ನಿಂಬೆ, ಟೊಮ್ಯಾಟೊ, ಹುಣಸೆಹಣ್ಣು, ಆಪಲ್ ಸೈಡರ್ ವಿನೆಗರ್, ಕಿತ್ತಳೆ ತರಹದ ಹಣ್ಣು ಇತ್ಯಾದಿ ಹುಳಿ ಆಹಾರಗಳು ನೋವಿನ ಬಗ್ಗೆ ಸಂವೇದನೆಯನ್ನು ಹೆಚ್ಚಿಸುತ್ತವೆ. ದೇಹದಲ್ಲಿ ಹುಳಿ ಪದಾರ್ಥಗಳು ಇದ್ದಾಗ ನಮ್ಮ ನರಮಂಡಲವು ಹೆಚ್ಚು ಸೂಕ್ಷ್ಮವಾಗುವುದರಿಂದ ಇದು ಸಂಭವಿಸುತ್ತದೆ. ಮಗು ನಿಂಬೆಹಣ್ಣನ್ನು ನೆಕ್ಕಿದಾಗ ಅವನು ತನ್ನ ಬಾಯಿಯನ್ನು ಕುಗ್ಗಿಸುತ್ತಾನೆ ಎಂಬುದನ್ನು ಗಮನಿಸಿರಬೇಕು. ಅದೇ ರೀತಿ ಹೆಚ್ಚು ಹುಳಿಯನ್ನು ತಿಂದಾಗ ನರಮಂಡಲ ಕಿರಿಕಿರಿಗೊಳ್ಳುತ್ತದೆ. ಹಾಗಾಗಿ ಹುಳಿ ಪದಾರ್ಥಗಳನ್ನು ಕಡಿಮೆ ತಿನ್ನಬೇಕು.
ಬೆಳ್ಳುಳ್ಳಿ ಎಣ್ಣೆ ಮಸಾಜ್ – ಆಲಿವ್ ಆಯಿಲ್, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಕ್ಯಾಸ್ಟರ್ ಆಯಿಲ್ ಅಥವಾ ಎಳ್ಳಿನ ಎಣ್ಣೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿ ಸಿಪ್ಪೆಯೊಂದಿಗೆ ಕುದಿಸಿ. ಸ್ವಲ್ಪ ಬೆಚ್ಚಗಿರುವಾಗಲೇ ಅದರಿಂದ ದೇಹದಾದ್ಯಂತ ಮಸಾಜ್ ಮಾಡಿ. ಕನಿಷ್ಠ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳಿ. ಇದು ದೇಹದಲ್ಲಿ ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ನೋವನ್ನು ಕಡಿಮೆ ಮಾಡುತ್ತದೆ. ಕೀಲುಗಳು, ಸ್ನಾಯುಗಳು ಮತ್ತು ನರಗಳನ್ನು ಬಲಪಡಿಸುತ್ತದೆ.