ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಪೂರ್ವದಲ್ಲಿ ತಾನು ನೀಡಿದ್ದ ‘ಗ್ಯಾರಂಟಿ’ ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ.
ಇನ್ನು, ಮಹಿಳೆಯರ ಖಾತೆಗೆ ನಗದು ಪಾವತಿಸುವ ಗೃಹಲಕ್ಷ್ಮಿ ಯೋಜನೆ ಸ್ವಾತಂತ್ರ್ಯೋತ್ಸವದ ಮರುದಿನ ಅಂದರೆ ಆಗಸ್ಟ್ 16ರಂದು ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಈ ಯೋಜನೆ ಅಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡಲಾಗುತ್ತಿದ್ದು, ಈ ಕುರಿತಂತೆ ಮಹತ್ವದ ಮಾಹಿತಿ ಇಲ್ಲಿದೆ.
ಈ ಯೋಜನೆ ಉದ್ಘಾಟನೆಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಸಲು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದು, ಹೀಗಾಗಿ ಇದನ್ನು ಮುಂದೂಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಆಗಸ್ಟ್ 16ರ ಬದಲಾಗಿ ಕನಿಷ್ಠ ಒಂದು ವಾರ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.