
ಪ್ರತಿ ತಿಂಗಳು ಕಾಡುವ ಮುಟ್ಟಿನ ನೋವನ್ನು ಸಹಿಸಿಕೊಳ್ಳೋದು ಮಹಿಳೆಯರಿಗೆ ಬಹಳ ಕಷ್ಟ. ವಾಕರಿಕೆ, ಹೊಟ್ಟೆ ಉಬ್ಬರಿಸೋದು, ಸೆಳೆತ, ನೋವು ಹೀಗೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಈ ಸಮಸ್ಯೆಗಳ ಮೂಲ ಕಾರಣ ಯಾವುದು ಅನ್ನೋದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ವೈದ್ಯರೇ ಹೇಳುವ ಪ್ರಕಾರ ನಿಮ್ಮ ಋತುಚಕ್ರದ ವಿವಿಧ ಹಂತಗಳಲ್ಲಿ ನಿಮ್ಮ ದೇಹಕ್ಕೆ ಸರಿಹೊಂದುವ ದಿನಚರಿ ಮತ್ತು ವ್ಯಾಯಾಮವನ್ನು ನಿರ್ವಹಿಸುವುದು ಸಹ ಮುಖ್ಯ. ನೀವು PMS ರೋಗಲಕ್ಷಣಗಳಿಂದ ಬಳಲುತ್ತಿದ್ದರೆ ಭಾರೀ ರಕ್ತಸ್ರಾವ, ತಲೆನೋವು ಇತ್ಯಾದಿ ಒತ್ತಡ ಹೆಚ್ಚಾಗಿರುತ್ತದೆ. ಹಾಗಾಗಿ ಶ್ರಮದಾಯಕ ವ್ಯಾಯಾಮಗಳನ್ನು ಮಾಡುವಂತಿಲ್ಲ.
ಆಯುರ್ವೇದದ ಪ್ರಕಾರ ಆರೋಗ್ಯಕರ ಮುಟ್ಟಿನ ಸಂಕೇತಗಳೆಂದರೆ ತಿಳಿ ಕೆಂಪು ಬಣ್ಣದ ರಕ್ತಸ್ರಾವ, ಕಲೆರಹಿತ ಮುಟ್ಟು, ದುರ್ವಾಸನೆ ಇರಬಾರದು. ಮುಟ್ಟಾದಾಗ ಹೆಚ್ಚಿನ ದೈಹಿಕ ಒತ್ತಡವಾಗುವಂಥ ಕೆಲಸಗಳನ್ನು ಮಾಡಬೇಡಿ. ನಿಮ್ಮ ಜೀರ್ಣಕ್ರಿಯೆಯ ಬಗ್ಗೆ ಹೆಚ್ಚು ಗಮನ ಕೊಡಿ. ನಿಮ್ಮ ಕರುಳಿನ ಚಲನೆ ಸರಿಯಾಗಿರಬೇಕು.
ದಿನವಿಡೀ ಬೆಚ್ಚಗಿನ ನೀರನ್ನು ಕುಡಿಯಿರಿ. ಅರಿಶಿನಕ್ಕೆ ಸ್ವಲ್ಪ ನೀರು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಮುಟ್ಟಾದ ಮೊದಲ ದಿನದಿಂದ ಮೂರನೇ ದಿನದವರೆಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ. ಮುಟ್ಟಿನ ನೋವಿದ್ದಾಗ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಸರಳವಾದ ಲಘು ಆಹಾರವನ್ನೇ ತಿನ್ನಿರಿ. ಅನ್ನ ತಿಳಿಸಾರು, ಸೂಪ್ ಹಾಗೂ ತರಕಾರಿಗಳನ್ನು ಸೇವಿಸುವುದರಿಂದ ಮುಟ್ಟಿನ ನೋವನ್ನು ನಿಯಂತ್ರಿಸಬಹುದು.