ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ ಅನುಸರಿಸಿದಲ್ಲಿ ನೀವು ಆನಂದದಿಂದ ಇರಬಹುದು.
ಮರೆವಿನಿಂದಾಗಿಯೇ ಅನೇಕರು ಬೇಸರಪಟ್ಟುಕೊಳ್ತಾರೆ. ಮರೆತು ಮಾಡಬಾರದ್ದನ್ನು ಮಾಡುತ್ತಾರೆ. ನೀವು ಮಾಡಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ನೋಡಿದಾಗ ನಿಮಗೆ ನಿಮ್ಮ ಜವಾಬ್ದಾರಿ ಏನೆಂಬುದು ತಿಳಿಯುತ್ತದೆ. ಇದರೊಂದಿಗೆ ನೀವು ಯಾವ ಕೆಲಸ ಮಾಡಬಾರದು ಎಂಬುದರ ಬಗ್ಗೆಯೂ ಗಮನ ಹರಿಸಿ. ಅದರಿಂದ ತಪ್ಪು ಮಾಡುವುದು ತಪ್ಪುತ್ತದೆ.
ನಿಮ್ಮ ದುಡಿಮೆಯಲ್ಲಿ ಸ್ವಲ್ಪವನ್ನಾದರೂ ಉಳಿತಾಯ ಮಾಡಿ. ಇದರಿಂದ ಕಷ್ಟಕಾಲದಲ್ಲಿ ಅನುಕೂಲವಾಗುತ್ತದೆ. ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪುತ್ತದೆ. ಸ್ವಚ್ಛತೆಗೆ ಒತ್ತು ಕೊಡಿ. ನಿಮ್ಮ ಸುತ್ತಲಿನ ಪರಿಸರ ಅಂದವಾಗಿದ್ದರೆ, ಮನಸ್ಸು ಖುಷಿಯಾಗುತ್ತದೆ. ಯಾರಾದರೂ ತಪ್ಪು ಮಾಡಿದಾಗ ಕ್ಷಮಿಸುವ, ತಿಳಿ ಹೇಳುವ ಗುಣ ನಿಮ್ಮಲ್ಲಿರಲಿ, ಸುಮ್ಮನೆ ರೇಗಬೇಡಿ. ಸಮಯ ವ್ಯರ್ಥ ಮಾಡದೇ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಮುಂದಾಗಿ.
ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಗೆಳೆಯರೊಂದಿಗೆ ಕಳೆಯಿರಿ. ಪ್ರವಾಸಕ್ಕೆ ಹೋಗಿ ಬನ್ನಿ. ಮನೆ ಮಂದಿಯ ಜೊತೆಗೆ ಬೆರೆಯಿರಿ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ. ಇನ್ನೊಬ್ಬರ ಕಷ್ಟಕ್ಕೆ ನೆರವಾಗುವುದರಿಂದ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸುತ್ತದೆ. ಯಾವಾಗಲೂ ಪಾಸಿಟಿವ್ ಆಗಿರಿ. ಗುರಿ ಯಶಸ್ಸಿನತ್ತ ಇರಲಿ. ಖುಷಿ ನಿಮ್ಮದಾಗುತ್ತದೆ.