ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಈ ಸಮಸ್ಯೆಯನ್ನು ಮನೆಮದ್ದುಗಳ ಮೂಲಕ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?
ತುಪ್ಪ ನೈಸರ್ಗಿಕ ಆಹಾರ. ಇದು ದೇಹಕ್ಕೆ ಎಷ್ಟು ಒಳ್ಳೆಯದೋ, ತ್ವಚೆಯ ಆರೋಗ್ಯ ಕಾಪಾಡಲು ಅಷ್ಟೇ ಒಳ್ಳೆಯದು. ಮನೆಯಲ್ಲೇ ತಯಾರಿಸಿದ ದೇಸೀ ಹಾಲಿನಿಂದ ತಯಾರಿಸಿದ ತುಪ್ಪವನ್ನು ತುಟಿಗೆ ಆಗಾಗ ಹಚ್ಚುವುದರಿಂದ ತುಟಿ ಒಡೆಯುವ ಹಾಗೂ ಒಣಗುವ ಸಮಸ್ಯೆ ದೂರವಾಗುತ್ತದೆ ಮತ್ತು ಸದಾ ತೇವಾಂಶದಿಂದ ಕೂಡಿರುತ್ತದೆ.
ಸತ್ತ ಜೀವಕೋಶಗಳನ್ನು ದೂರ ಮಾಡುತ್ತದೆ. ಬಿಳಿ ಸಿಪ್ಪೆ ಏಳುತ್ತಿದ್ದರೆ ಅದನ್ನು ಇಲ್ಲವಾಗಿಸುತ್ತದೆ. ಇದರಲ್ಲಿರುವ ಕೊಬ್ಬು ಹಾಗೂ ಪ್ರೊಟೀನ್ ಗಳು ನಿಮ್ಮ ತುಟಿಯನ್ನು ನಸುಗೆಂಪು ಬಣ್ಣಕ್ಕೆ ಬದಲಾಯಿಸುತ್ತವೆ.
ತುಟಿ ಒಡೆಯುವ ಸಮಸ್ಯೆ ಗಂಭೀರವಾಗಿದ್ದರೆ ಅಂದರೆ ಒಡೆದು ಗಾಯಗಳಾಗಿ ರಕ್ತ ಒಸರುತ್ತಿದ್ದರೆ ತುಪ್ಪಕ್ಕೆ ಜೇನುತುಪ್ಪ ಬೆರೆಸಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಿ. ಎರಡೇ ದಿನದಲ್ಲಿ ನಿಮ್ಮ ತುಟಿ ಒಡೆಯುವ ಸಮಸ್ಯೆ ದೂರವಾಗುತ್ತದೆ. ಹೆಚ್ಚು ಖಾರ ಸೇವಿಸದಿರುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಕೂಡಾ ಬಹಳ ಮುಖ್ಯ.