ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ.
ಈ ಕೆಳಗಿನ ಕೆಲವು ಆಹಾರಗಳು ಮಾಂಸಾಹಾರದಿಂದ ದೊರೆಯುವ ಪ್ರೋಟೀನ್‌ಗೆ ಪರ್ಯಾಯವಾಗಿವೆ.
ಧಾನ್ಯಗಳು
ಹೆಸರು ಬೇಳೆ, ರಾಜ್ಮಾ, ಕಡಲೆ ಬೇಳೆ ಮತ್ತು ಸೋಯಾಬೀನ್‌ಗಳನ್ನು ಸಲಾಡ್, ಸೂಪ್ ಗಳಲ್ಲಿ ಬಳಸಿ. ಅಥವಾ ಕುಚಲಕ್ಕಿಯ ಜೊತೆ ಸೇವಿಸಿ. ಈ ಮೂಲಕ ಊಟವನ್ನೂ ಪರಿಪೂರ್ಣ ಆಹಾರವನ್ನಾಗಿಸಿ.
ವೆಜಿಟೆಬಲ್ ಕಿಚಡಿ
ಬೇಳೆ ಮತ್ತು ಅಕ್ಕಿಯ ಪೌಷ್ಠಿಕಾಂಶವನ್ನು ಸದುಪಯೋಗಪಡಿಸಿಕೊಳ್ಳುವ ಒಂದು ಉತ್ತಮ ವಿಧಾನ ಕಿಚಡಿಯನ್ನು ತಯಾರಿಸಿ ತಿನ್ನುವುದು. ಇದೊಂದು ಆರೋಗ್ಯಕರವಾದ ಆಹಾರ.
ಕ್ವಿನೋ
ಕ್ವಿನೋ ದಕ್ಷಿಣ ಅಮೆರಿಕ ಮೂಲದ ಧಾನ್ಯವಾಗಿದ್ದು, ಇದು ಅತ್ಯಧಿಕ ಪ್ರೋಟೀನ್‌ನಿಂದ ತುಂಬಿದೆ. ಪುಲಾವ್ ಸೇರಿದಂತೆ ವಿವಿಧ ಭಾರತೀಯ ಅಡುಗೆಗಳಲ್ಲಿ ಇದನ್ನು ಬಳಸಬಹುದು.
ಅಮರಂತ್ ಪಲಾವ್
ಅಮರಂತ್ ಪಲಾವ್ ಹೈ ಪ್ರೋಟೀನ್ ಹೊಂದಿರುವ ಆಹಾರವಾಗಿದ್ದು, ಭರಪೂರ ಪ್ರೋಟಿನ್‌ನಿಂದ ತುಂಬಿರುತ್ತದೆ. ಒಂದು ಕಪ್ ಬೇಯಿಸಿದ ಅಮರಂತ್‌ನಲ್ಲಿ 9 ಗ್ರಾಂ ಪ್ರೋಟೀನ್ ಪಡೆಯಬಹುದು. ಇದು ಫೋಲೇಟ್ ಮತ್ತು ಕ್ಯಾಲ್ಸಿಯಂನಿಂದ ಕೂಡ ಸಮೃದ್ಧವಾಗಿದೆ.
ಪನ್ನೀರ್ ಅಥವಾ ಕಾಟೇಜ್ ಚೀಸ್
ಪನ್ನೀರ್ ಪ್ರೋಟೀನ್ ಘಟಕಾಂಶದಿಂದ ಭರಿತವಾದ ಪದಾರ್ಥ. ಪನ್ನೀರ್ ಟಿಕ್ಕ ಮಾಡಿ ಸೇವಿಸಬಹುದು ಅಥವಾ ಪನ್ನೀರ್ ಭುರ್ಜಿ ಮಾಡಿ ರೋಟಿ ಜೊತೆಗೆ ತಿನ್ನಬಹುದು.
ಟೋಫು
ರುಚಿಕರವಾದ ಮತ್ತು ಹೆಚ್ಚು ಪ್ರೋಟೀನ್‌ಯುಕ್ತ ಭಕ್ಷ್ಯವಾದ ಟೋಫುವನ್ನು ಬೀನ್ಸ್, ಕ್ಯಾರೆಟ್ ಮತ್ತು ಬ್ರಕೋಲಿ ಮುಂತಾದ ಇತರ ಋತುಮಾನದ ತರಕಾರಿಗಳೊಂದಿಗೆ ಸೇರಿಸಿ ಸ್ಟಿರ್ ಫ್ರೈ ಮಾಡಿ ಸೇವಿಸಬಹುದು.
ಕಪ್ಪು ಕಡಲೆ
ಕಪ್ಪು ಕಡಲೆ ಸಹ ಪ್ರೋಟೀನ್ ಭರಿತ ಆಹಾರವಾಗಿದ್ದು, ಚನ್ನಾ ಚಾಟ್ ಅಥವಾ ಚನ್ನಾ ಸುಕ್ಕಾ ಮಾಡಿ ತಿನ್ನಬಹುದು.